ಪಾಲಿಸೆನ್ನನು ಜಾನಕೀ ಅರವಿಂದ ನಾಯಕಿ ಪ.
ಫಾಲಲೋಚನನುತೆ ತ್ರೈಲೊಕ್ಯ ವಿಖ್ಯಾತೆ
ಬಾಲಾರ್ಕದ್ಯುತಿ ಭಾಸುರಾನನೆ
ನೀಲಾಳಕೆ ನಿತ್ಯನಿರ್ಮಲೆ ಅ.ಪ.
ಜನನಿಯಲ್ಲವೆ ನೀನು ತನುಭವರೊಳು
ಇನಿತು ನಿರ್ದಯವೇನು
ಮನಕೆ ತಾರಲು ನೀನಾಕ್ಷಣದೊಳೇ ದೀನನಂ
ಅನಘ ಸಂಪದವಿತ್ತು ಮೆರೆಯಿಪ
ಘನತೆಯಾಂತವಳಲ್ಲವೇನು 1
ಬಾಗುತೆ ಶಿರವಿಳೆಗೆ ಬೇಡುವ ಬಗೆ
ಕೂಗು ಬೀಳದೆ ಕಿವಿಗೆ
ಭಾಗವತಾರ್ಚಿತೆ ಭಾರ್ಗವೀ ನಾಮಖ್ಯಾತೆ
ಬೇಗೆಯೆಲ್ಲವ ಪರಿದು ಯೆನ್ನ
ರಾಗದಿಂದಲಿ ನೋಡು ಭರದಲಿ 2
ನೀನಲ್ಲದನ್ಯರಂ ಕಾಣೆನು ಹಿತರಂ
ಮಾನಿತ ಗುಣಯುತರಂ
ಆನತರಾಗುವ ಸೂನೃತವ್ರತಿಗಳಿ
ಗಾನಂದವಿತ್ತು ಪೊರೆವ
ದಾನಿ ಶೇಷಗಿರೀಶರಮಣಿ 3