ನಿನಗೆ ನಾ ಬ್ಯಾಡಾದನೆ ಘನಕೃಷ್ಣ
ಮಾನಿನಿಯ ಕಿಂತ ಕೊನೆಯೆ ಪ
ಎನ್ನ ಕಣ್ಣಿಗೆ ತೋರದೆ
ಬೆನ್ನಲ್ಲಿ ಮಾನಿನಿಗೆ ನೀ ತೋರಿದ್ಯಾ
ಮನ್ನಿಸುವ ನಿತ್ಯದಲಿ
ಮುನ್ನ ನಿನಗೆ ನಾ ದ್ವೇಷಿಯಲ್ಲವೋ 1
ಒಳಗೆ ನೀನಿರುವಿ ಎಂದೂ
ತಿಳಿದು ಬಲು ತೊಳಲಿ ಶರಣು ಬಂದರೆ
ಪೊಳೆಯದಲೆ ಮನಸಿನೊಳಗೆ
ಕೊಳಲು ಕರೆ ಬಾಲೇಗೆ ನೀ ತೋರಿದ್ಯಾ 2
ಸುಳ್ಳು ಇದು ಎಂದ್ಹೇಳಲು
ಸಲ್ಲದೆಲೊ ಕಳ್ಳ ನೀನೆಂದು ಬಂದೆ
ಪುಲ್ಲನಾಭನೆ ತೋರೆಲೊ
ಮಲ್ಲನೆ ಗಲ್ಲ ಪಿಡಿದು ಮುದ್ದಿಪೆ 3
ನೀರದಸಮ ಕಾಂತಿಯ
ನಾರಿಮಣಿ ಬೀರಿದಳೊ ಶ್ರೀಕೃಷ್ಣನೆ
ಕರುಣಸಾಗರನೆಂಬೊದು
ಮರೆತು ನೀ ದೂರ್ಹೋಗಿ ನಿಲ್ವರೇನೊ 4
ಮೂರು ವಯಸೆಂದ್ಹೇಳರೊ
ಚಾರುತರಾಭರಣ ಇಟ್ಟಿಹನೆಂಬುರೊ
ಈ ರೀತಿ ಅಬಲೆಯರು
ನಿರುತದಲಿ ಧರೆಯೊಳಗೆ ಪೇಳ್ವುದರಿಯಾ5
ಎಂದಿಗಾದರು ನಿನ್ನನು
ಪೊಂದದೆಲೆ ಇಂದಿರಾಧವ ಬಿಡುವನೆ
ತಂದೆ ಶ್ರೀ ಮಧ್ವರಾಯ
ಛಂದದಲಿ ಮುಂದೆ ತಂದೆಳೆವ ನಿನ್ನ 6
ನೀ ಬಿಟ್ಟರೇ ಕೆಡುವೆನೆ
ಶ್ರೀ ಭೀಮನೊಬ್ಬ ಬಲ ಸಾಕೆಲೊ
ಅಪಾರ ದೈವ ನಿನ್ನ
ಕೊಬ್ಬುತ ತಬ್ಬಿ ನಾ ನಿನ್ನೊಲಿಸುವೆ7
ಮಾನದಿಂದಲಿ ತೋರೆಲೊ
ನಿನಗಿದು ಘನತೆಯಲ್ಲವೊ ಜೀಯನೆ
ಮುನ್ನ ಮಾಡ್ದುಪಕೃತಿ ಮರೆತೆಯಾ8
ಇನಿತು ವಂಚಿಸಿ ಪೋದರೆ
ನಾ ನಿನ್ನ ಹೀನ ಗುಣದವನೆನ್ನುವೆ
ಮನ್ನಿಸಿ ಸಲಹೋ ಬ್ಯಾಗ
ಶ್ರೀ ನರಹರಿಯೆ ನಾ ಭಿನ್ನೈಸುವೆ9