ಸಿರಿದೇವಿ ವರಬೇಗ ಕರುಣಿಸೊ ದಯದಿಂದ
ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ
ನರಹರಿಕರುಣಾಕರ ಪ.
ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು
ಸಿರಿಯೊಳಗುಸುರದೆ ಗರುಡನ ಪೆಗಲೇರಿ
ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1
ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ
ನಾರಾಯಣನೆಂದು ಬೇಡಿದ ಮಾತ್ರದಿ
ವಾರಿಜಭವಪಿತ ಪಾರಗಾಣಿಸಿದಿ 2
ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು
ಹರಿ ನೀನೆ ಗತಿಯೆನುತಿರೆ ಕಂಭದಿ
ಇರವ ತೋರಿ ಬಹು ಪರಿಯಲಿ ಸಲಹಿದಿ 3
ದುರುಳ ಸೀರೆಯ ಸೆಳೆಯೆ
ಹರಿಕೃಷ್ಣ ಸಲಹೆನೆ ಸೀರೆಯ ಮಳೆ
ಗರದಂದದಲಿತ್ತು ಪರಿಪಾಲಿಸಿದೆ 4
ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ
ಭಿನ್ನವಾಗುವದೆ ನಿನ್ನ ಪದಾಂಬುಜ
ವನ್ನು ನಂಬಿದ ಮೇಲಿನ್ನುದಾಸೀನವೆ 5
ಪಾಕಶಾಸನನಘವ ನೀಕರಿಸಿ ಸಲಹಿದನೆ
ಭೀಕರವಾಗದೆ ಸಾಕು ಸಾನುಭವ
ಕೃಪಣ ದಯಾಕರ ಮೂರುತಿ 6
ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ
ತಳಮಳಗೊಳಿಸುತ ಬಳಲಿಪದುಚಿತವೆ
ಉಳುಹಿನ್ನಾದರು ನಳಿನನಾಭ ಹರಿ 7
ಬಡವ ಮಾನವನೊಬ್ಬ ಪಡೆಯ ತನ್ನವರನ್ನು
ಕೆಡಲು ಬಿಡನು ಜಗದೊಡೆಯ ನೀ ಎನಗಿರೆ
ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8
ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ
ಇನ್ನು ಬಳಲಿದರೆ ನಿನ್ನ ಘನತೆಗಿದು
ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9
ಮಾನಾಮಾನವ ತೊರೆದು ನಾನಾ ದೇಶದಿ ತಿರಿದು
ಶ್ರೀನಿವಾಸ ನಿನ್ನಾನನ ದರುಶನ-
ವನು ಮಾಡಿದ ಮೇಲೇನಿದು ತಾತ್ಸಾರ 10
ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ
ದಾಸದಾಸನೆಂಬೀ ಸೌಖ್ಯವನಿತ್ತು
ಪೋಷಿಸು ಶೇಷಗಿರೀಶನೆ ತವಕದಿ 11