ಈ ದೇಹ ಬಲು ಸಾಧನ
ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ
ಶ್ವಸನ ಮತವೆ ಪೊಂದಿ |
ನಸು ಚಿತ್ತದಲಿ ಯಿದ್ದು |
ವಿಷಯಂಗಳೆಲ್ಲ ನಿರಾಕರಿಸಿ |
ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ |
ನಿತ್ಯ ಸಜ್ಜನರ ಒಡಗೂಡು1
ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ |
ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು |
ಸ್ನೇಹಭಾವದಲಿ ಸತತ ಭಕುತಿಯ ಮಾಡು |
ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2
ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ |
ಅನುಗಾಲ ಇರಲಿ | ಬಂಧುಗಳ ಕೂಡಾ |
ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು |
ಘನಜ್ಞಾನದಲಿ ನಡೆದು ಗುಣವಂತನಾಗು 3
ಧರ್ಮೋಪದೇಶವನೆ ಮಾಡುತಲಿರು ನೀನು |
ಪೇರ್ಮೆಯುಳ್ಳವನಾಗು ಪೃಥವಿಯೊಳಗೆ |
ನಿರ್ಮತ್ಸರನಾಗು ವೈಷ್ಣವ ಜನರ ಕೂಡ |
ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4
ಕರ್ಣ ತುಲಸೀ ದಳ |
ಬೆರಳಲ್ಲಿ ಪವಿತ್ರದುಂಗರವನಿಟ್ಟು |
ಪರಮ ವಿರಕುತಿಯಲಿ ದೇಹವನು ದಂಡಿಸುವ |
ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5
ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ |
ಉದರಕ್ಕೆ ಪೋಗಿ ಚಾಲ್ವಯದಿರು
ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ
ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6
ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು |
ಅರ್ಥವನೆ ಬಯಸದಿರು ಬಾಕಿ ಬಸಿದು
ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ |
ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7
ಪರಿಯಂತ |
ಮಿತ ಆಹಾರ ಮಿತ ನಿದ್ರಿ ಮಿತ ಮಾತನು |
ಸತತ ಮೀರದಲಿರು ಶೋಕಕ್ಕೊಳಗಾಗದಿರು |
ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8
ಜಾಗರ ಗಾಯನ |
ಮರಳೆ ಮರಳೆ ಮಂತ್ರ ಪಠನೆಯಿಂದ |
ಧರೆಯೊಳಗೆ ಪುಣ್ಯವಂತನಾಗಿ ಸರ್ವದ |
ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9
ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ |
ನಖಶಿಖವಾಗಿ ಆನಂದ ವಿಡಿದೂ |
ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ |
ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10
ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ |
ಕರ ಮುಗಿದು ತಿಳಿದು |
ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ |
ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11