ಕೈಬಿಡದೆ ಕಾಪಾಡು ಕರುಣಾಳು ಹರಿಯೇ
ನಾಬಿಡದೆ ನಿನ್ನಡಿಯ ಮೊರೆಹೊಕ್ಕೆ ದೊರೆಯೇ ಪ
ಎಲ್ಲಿನೋಡಿದರಲ್ಲಿ ನಿನ್ನ ಮೂರ್ತಿಯ ತೋರಿ
ಎಲ್ಲಕಾಲಗಳೊಳಗು ಭಜನೆ ಬಲಿಸಿ
ಉಲ್ಲಸದಿ ಕಾರ್ಯಗಳೊಳೆಲ್ಲ ಸೇವೆಯಗೈಸಿ
ನಿಲ್ಲದೆಯ ನೀನಂತ್ಯಕೊದಗು ಸಂತೈಸಿ1
ಧನ್ಯ ಭಕ್ತರೊಳಾಡಿ ಚನ್ನಚರಿತೆಯ ಪಾಡಿ
ಉನ್ನತೋತ್ಸವಗಳನು ನೋಡಿ ನೋಡಿ
ಯನ್ನ ಮನಕಿನ್ನೊಂದ ತೋರಿಸದೆಯೆ ಸಂ
ಪನ್ನ ಪದಯುಗಪೂಜೆ ಕೊಡು ಮುನ್ನ 2
ಘನಜಾಜಿ ಪಟ್ಟಣವಾಸ ಇನಕರ ಪ್ರಭುಶ್ರೀಶ
ವನಜಸಂಭವನಯ್ಯ ವರದ ಜೀಯ
ಅನುನಯದಿ ಬೇಡುವೆನು ನಾನಂಬೆನನ್ಯರನು
ತನಯನೊಳು ಕನಿಕರಿಸು ನಿನ್ನಡಿಯೊಳಿರಿಸು 3