ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ
ನರಸಿಂಹ ನಮಿಪೆ ನಾ ನಿನ್ನ
ಚಾರುಚರಣಕಮಲಕೆ ನೀ ಎನ್ನ
ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ
ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ
ತರಳ ಪ್ರಹ್ಲಾದನ್ನ ನುಡಿಯಾ ಕೇಳಿ
ತ್ವರಿತದಿ ಬಂದ್ಯೊ ಎನ್ನೊಡೆಯ ನಾನು
ಕರುಣಾಳೊ ಭಕ್ತರ ಭಿಡೆಯ ಮೀರ
ಲರಿಯೆ ಎಂದೆಂದು ಕೆಂಗಿಡಿಯ ಅಹ
ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ
ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1
ಪ್ರಳಯಾಂಬುನಿಧಿ ಘನಘೋಷದಂತೆ
ಘುಳಿ ಘುಳಿಸುತಲಿ ಪ್ರದೋಷ ಕಾಲ
ತಿಳಿದು ದೈತ್ಯನ ಅತಿರೋಷದಿಂದ
ಪ್ಪಳಿಸಿ ಮೇದಿನಿಗೆ ನಿದೋಷ ಅಹ
ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2
ಕ್ರೂರ ದೈತ್ಯನ ತೋರಗರುಳಾ ತೆಗೆ
ದ್ಹಾರ ಮಾಡಿದೆ ನಿಜಕೊರಳ ಕಂಡು
ವಾರಿಜಾಸನ ಮುಖದಯರ್ಕಳ ಪುಷ್ಪ
ಧಾರಿಗೆರೆದು ವೇಗ ತರಳಾ ಆಹ
ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ
ರೋರುಹಾವನು ಕಾಯ್ದೆ ಕಾರಣ್ಯನಿಧಿ 3
ಜಯಜಯ ದೇವವರೇಣ್ಯ ಮಹ
ದ್ಭಯ ನಿವಾರಣನೆ ಅಗಣ್ಯ ಗುಣಾ
ಶ್ರಯ ಘೋರ ದುರಿತಾರಣ್ಯ ಧನಂ
ಜಯ ಜಗದೇಕ ಶರಣ್ಯ ಅಹ
ಲಯವಿವರ್ಜಿತ ಲೋಕ
ತ್ರಯ ವ್ಯಾಪ್ತ ನಿಜಭಕ್ತ
ಪ್ರಿಯ ಘೋರಮಯ ಹರ
ದಯ ಮಾಡೆನ್ನೊಳು ಲಕ್ಷ್ಮೀ 4
ಕುಟಲ ದ್ವೇಷದವನು ನೀನಲ್ಲ ನಿನ್ನಾ
ರ್ಭಟಕಂಜಿದರು ಸುರರೆಲ್ಲ ನರ
ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ
ಸಟಿ ಕಾಣೆನಪ್ರತಿಮಲ್ಲ ಅಹ
ವಟಪತ್ರಶಯನ ಧೂ
ರ್ಜಟಿವಂದ್ಯ ಜಗನ್ನಾಥ
ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5