ಜೋ ಜೋ ಜೋನಂತ ಸದ್ಗುಣಧಾಮಾ
ಜೋ ಜೋ ಜೋ ಯದುವಂಶಲಲಾಮ
ಜೋ ಜೋ ಸಕಲ ಮಲಾಪಹ ನಾಮ
ಜೋ ಜೋ ಸಮಾಲಿಂಗಿಹ ಸತ್ಯಧಾಮ ಪ.
ನಿಗಮತತಿಗಳೆಲ್ಲ ಪೊಗಳುತ್ತಲಿಹನ
ನಗಚಾಪ ಪಿತನನ್ನು ನಗುತ ಪೆತ್ತವನ
ಸ್ವಗತ ಭೇದಶೂನ್ಯ ಖಗಪ ವಾಹನನ
ಮಗುವೆಂದು ಕೂಗುವ ಮಾರಜನಕನ 1
ಮೂರು ಗುಣಂಗಳ ಮೀರಿದ ಸಿರಿನಲ್ಲ
ಚೋರತನದಿ ಬೆಣ್ಣೆ ಮೆಲುವರೆ ಬಲ್ಲ
ಈರೇಳು ಭುವನವ ಮೂರಡಿ ಮಾಡಿದ
ಧೀರಗೆ ತಕ್ಕ ತೊಟ್ಟಿಲ ಕಾಣೆನಲ್ಲ 2
ಜಾಗ್ರತ್ಸ್ವಪ್ನ ಸುಷುಪ್ತಿ ಭಾವಗಳು
ಭೋಗಿ ಶಯನತ್ವದಧೀನವಾಗಿರಲು
ವಾಗೀಶವಾಯುಗಳರ್ಚಿಪ ನಿನ್ನನು
ತೂಗುವ ರಾಗವ್ಯಾವದೊ ಪೇಳೊ ರನ್ನ 3
ಆದರು ಕಲುಷಾವನೋದನ ನಿನ್ನಯ
ಪಾದಕಮಲಗಳ ಪೊಗಳಿ ಪಾಡುವರ
ಕಾದುಕೊಳ್ಳುವೆನೆಂಬ ವೇದ ಸಾರವನ್ನು
ನೀ ದಯ ಮಾಡಿದರೋದುವೆನಿದನು 4
ನೀರೊಳಗಾಡಬ್ಯಾಡೆಂದರೆ ಕೇಳದೆ
ಮಂದರ ಪೊತ್ತು ಬೇರನೆ ಕಿತ್ತಿ
ಘೋರ ದೈತ್ಯನ ಸೀಳಿ ತೋರಿ ವಾಮನ ಮೂರ್ತಿ
ಧಾರುಣೀಶರ ಕೊಂದ ಧೀರ ರಾಘವನೆ 5
ಚಿಕ್ಕತನದಿ ಬಹು ರಕ್ಕಸ ಕುಲವ
ಧಿಕ್ಕರಿಸುತ ಕೈಗೆ ಸಿಕ್ಕದೆ ಓಡಿ
ಮಕ್ಕಳಾಟಿಕೆಯಿಂದ ಫಕ್ಕನೆ ಮಾವನ
ಸೊಕ್ಕ ಮುರಿದು ನೆಲ ತಿಕ್ಕಿದ ಹರಿಯೆ 6
ಘೋರ ಜರಾಸಂಧ ಸಾಲ್ವೈಕಲವ್ಯರ
ಗಾರಗೆಡಿಸಿ ದ್ವಾರಕಾ ಪುರ ರಚಿಸಿ
ಕೌರವನೊಶದಲಿ ಸೇರಿದ ಧರಣಿಯ
ಮಾರುತಿಯಲಿ ಪ್ರೇಮದೋರಿ ಪಾಲಿಸಿರಿ 7
ಎರಡು ಹೆಂಗಳನಾಳುವುದೆ ಬಹು ಘೋರ
ಎರಡೆಂಟು ಸಾವಿರ ಮತ್ತೆಂಟು ನೂರ
ನೆರಹಿಕೊಂಡರೆ ನಿನಗಾಗದೆ ಭಾರ
ಪರಮಾತ್ಮ ನಿನಗಿದು ಲೀಲಾವತಾರ 8
ಬತ್ತಲೆ ತಿರುಗಿದರಾಗದೆ ದೃಷ್ಟಿ
ಕರವಾಳ ಮುಷ್ಟಿ
ಸುತ್ತ ತಿರುಹಿ ಪಾಪಿಗಳ ಕೊಂದ ಜಟ್ಟಿಯ
ನಿತ್ಯ ನಂಬಿದಪರಿಗಾನಂದ ಪುಷ್ಟಿ 9
ಅಣುಗಳಿಗೆ ಪರಮಾಣುವಾಗಿ ನಿಲುವಿ
ಘನಕಿಂತ ಘನವಾಗಿದನುಜರ ಕೊಲುವಿ
ಕನಡಿಲಿ ಪ್ರತಿಫಲಿಸುವ ವೋಲಿರುವಿ
ಕನಲುತ ಭಕ್ತರು ನೆನೆವಲ್ಲಿ ಒಲಿವಿ 10
ಜೋಗಿ ಜನರ ಸಹವಾಸ ಬೇಡೆಂದರೆ
ಪೋಗಿ ಪೋಗಿ ಅವರ ಮನದೊಳಗಿರುವಿ
ಶ್ರೀ ಗುರು ಮಧ್ವಮುನಿಯ ಮೇಲೆ ಕರುಣದಿ
ಸಾಗಿ ಬಂದಿರುವೀಗ ರೌಪ್ಯ ಪೀಠದಲಿ 11
ಶೃಂಗಾರ ವಾರುಧಿ ಶ್ರೀ ಕೃಷ್ಣಜೀಯ
ಮಂಗಳ ದೇವಿಯ ಮೋಹಿಪಕಾಯ
ಗಂಗೆಯ ಪಡದಂಗುಷ್ಠವನಿಟ್ಟಪಾಯ
ರಂಗನಾಥ ಶ್ರೀ ವೆಂಕಟರಾಯ 12