ಒಟ್ಟು 38 ಕಡೆಗಳಲ್ಲಿ , 18 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಆಳ್ವಾರಾಚಾರ್ಯ ಸ್ತುತಿಗಳು (1) ಆಂಜನೇಯ ನೋಡಿರೈ ಕಣ್ದಣಿಯಾ ಸಜ್ಜನರೆಲ್ಲ ಪಾಡಿರೈ ಮನದಣಿಯಾ ಪ ಗಾಢಭಕುತಿಯನಾಂತು ಭಜನೆಯ ಮಾಡುವರ ದುರಿತಗಳನೋಡಿಸಿ ಕೂಡೆನಿರ್ಮಲರೆನಿಸಿ ಪೊರೆವಾ ರೂಢನಹ ಮಾರುತಿಯ ಮೂರ್ತಿಯ ಅ.ಪ ಉಡಿಯೋಳ್ ಘಂಟೆಗಳೆಸೆಯೆ ಚರಣದೊಳುಳ್ಳ ತೊಡರುಗಗ್ಗರಮುಲಿಯೆ ರ್ಕಡೆಯ ಕರ್ಣದಿ ಪೊಳೆಯೆ ಕಡಗ ಮಣಿಮಕುಟಗಳ ಪೇರುರ ದೆಡೆಯ ವಜ್ರದಪದಕ ಮೊದಲಹ ತೊಡಿಗೆಗಳ ಸಡಗರದೊಳೊಪ್ಪುವ ದೃಢತರದ ಮಾರುತಿಯ ಮೂರ್ತಿಯ 1 ಭರದಿಂದ ಶರನಿಧಿಯಾ ಲಂಘಿಸಿ ಪೊಕ್ಕಾ ನಿರುಪಮತರ ಲಂಕೆಯ ಗುರಿಗೊಂಡರಸಿ ಸೀತೆಯಾ ಕಂಡಾರಘು ವರನುರುಮುದ್ರಿಕೆಯ ಕರದೊಳಿತ್ತಾರಮಣಿಯಿಂ ವಿ ಸ್ಫುರಿಪ ಚೂಡಾಮಣಿಯ ಕೈಕೊಂ ಡಿರದೆ ಬಂದೊಡೆಯಂಗೆ ಸಲಿಸಿದ ಪರಮಬಲಯುತನಮಳಮೂರ್ತಿಯ 2 ವಾದವಿದೂರನನು ಪಾವನ ಮೃದು ಪಾದಾರವಿಂದನನು ವೇದಾಂತವೇದ್ಯನನು-ಸನ್ನುತಪರ ನಾದಾನುಮೋದನನು ಸಾದರದೊಳೈತಂದು ಪ್ರಾರ್ಥಿಪ ಸಾಧುಸಂತತಿಗೊಲಿದು ಪರಮಾ ಮೋದದಿಂ ಪರಮಾರ್ಥವಿಷಯವ ಬೋಧಿಸುವ ಮಾರುತಿಯ ಮೂರ್ತಿಯ 3 ರಂಗನಾಥನದೂತನ ಸತ್ಕರುಣಾಂತ ರಂಗನಾರ್ತಪ್ರೀತನ ಕಂಗೊಳಿಸುವ ನೂತನಪುರವರದೊಳು ಹಿಂಗದೊಪ್ಪಿರುವಾತನ ಮಂಗಳಾತ್ಮನ ಮೋಹದೂರನ ಸಂಗರಹಿತನ ಸತ್ಯಚರಿತನ ರಂಗದಾಸಪ್ರಣಿತಮಹಿಮೋ ತ್ತುಂಗ ಶ್ರೀ ಮಾರುತಿಯ ಮೂರ್ತಿಯ 4
--------------
ರಂಗದಾಸರು
(ಇ) ಶ್ರೀಕೃಷ್ಣಲೀಲೆ ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ 1 ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ 2 ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ 3 ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ 4 ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ 5 ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ6 ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ 7 ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ8 ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ 9 ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ 10 ಕಂಗಳ ಕುಡಿ ನೋಟಂಗಳಿÀಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ11 ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ 12 ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ 13 ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ14 ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ 15 ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತÀ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ16 ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ 17
--------------
ವ್ಯಾಸರಾಯರು
(ಈ) ಆತ್ಮನಿವೇದನಾ ಕೃತಿಗಳು ಅಕಟಕಟ ಬಹಳ ಬಡತನವಡಸಿದುದೆ ನಿನಗೆ ಅಕಳಂಕ ಚರಿತ ಹರಿಯೆ ಪ ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ ಸುಖಮಯ ಶರೀರ ಚನ್ನರಾಯಾ ಅ.ಪ ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ ದಂದಿಗೆ ಸಾಲದಾಯಿತೆ ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು ದಂದಿಗೆ ಸಾಲದಾಯಿತೆ ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ ದೊಂದೊಂದು ಗೋಗಳಿಗೆಛಂದದಲಿ ನಿಂದು ದಾನವ ಕೊಂಡೆಯಾ ಸ್ವಾಮಿ 1 ಉರದೊಳಗೆ ಅನವರತ ವಾಸವಾಗಿರುತಿಪ್ಪ ಶರಧಿಸುತೆ ಕೈಬಿಟ್ಟಳೇ ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು ಬರಡಾಯಿತೇ ಕಾಮಧೇನೂ ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ ಭರದಿ ಕೈ ಒಡ್ಡುತಿಹರೆ ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ ದೂರಿಗೊಳಗಾಗಬಹುದೆ ಸ್ವಾಮಿ 2 ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ ಮೊತ್ತದಿಂ ಕೂಡಿಕೊಂಡೂ ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ ಗೆತ್ತಿ ಘಂಟೆಗಳ ಕಟ್ಟೀ ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ ಗಿತ್ತೆ ಸುರಪದವನು ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ ಭೃತ್ಯನ್ನ ಕಾಯೊ ಸತತ ಸ್ವಾಮಿ 3
--------------
ಬೇಲೂರು ವೈಕುಂಠದಾಸರು
ಅಹುದಹುದು ದೀನ ಬಂಧು ಅಹುದಹುದು ದೀನಬಂಧು|ಶ್ರೀ ಕೃಷ್ಣ| ಸಹಕಾರಿ ಶರಣ ಜನರಾ ಹರಿಯೇ ಪ ಕಪ್ಪೆಮರಿ ಅಂದರೇನು|ಕಾಯ್ದಿರುವಾ| ಅಪ್ಪವಿನೋಳು ಬಳಲುತ|ಹರಿಯೇ| ಸರ್ಪಶಯನೆಂದು ಕರೆಯೆ|ಬಂದೊದಗಿ| ಒಪ್ಪಿಕೊಳ್ಳಬೇಕು ದಯದಿ ಹರಿಯೇ 1 ಪಕ್ಷಿತತ್ತಿಯು ಬೀಳಲು|ಭಾರತ ಮಹಾ| ಅಕ್ಷೋಹಿಣಿ ರಣದಲಿ ಸಲವೆಂದು| ಗಜ ಘಂಟೆಯಾ|ನೀ ಕೆಡಹಿ| ರಕ್ಷಿಸಿದ ಮುಸುಕಿ ಅವರ ಹರಿಯೇ 2 ಕಬ್ಬುಲಿಗ್ಯಾತದ ರೂಪದೀ ಕಪಟದಲೀ| ಒಬ್ಬರಾಯನ ಕನ್ಯೆಯಾ ಭೋಗಿಸುತ| ನಿಬ್ಬುರಕ ನಿನ್ನ ನೆನೆಯೇ|ಗತಿಗೊಟ್ಟು| ಉಬ್ಬುಸವ ಕಳೆಯಲಿಲ್ಲದೇ ಹರಿಯೇ3 ವ್ಯಭಿಚಾರಿ ಗಣಿಕೆ ತಾನು|ಧನವೀವ| ಪ್ರಭುಗಳೊಂದಿನ ಕಾಣದೇ ವಿರಕ್ತಿಯಲಿ| ವಿಭುನಿನ್ನೀ ಕೀರ್ತನೆಗಳಾ ಮಾಡಲಿಕ್ಕೆ| ಅಭಯ ಪದವಿತ್ತೆ ಬೇಗ ಹರಿಯೇ4 ಹಿಂದಾದ ಕಥಿಗಳಿವನು|ಅಹುದಲ್ಲೋ| ಎಂದಾರು ಬಲ್ಲರಯ್ಯಾ ಮಹಿಪತಿ| ಕಂದರೊಡೆಯನೇ ಎನ್ನ ಕೈ ಪಿಡಿದ| ರಿಂದು ನಿಜವೆಂಬೇ ನಾನು ಹರಿಯೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆ) ಶ್ರೀಕೃಷ್ಣ ಲೀಲೆ 25 ಇಂದಿನಿರುಳಿನ ಕನಸಿನಲ್ಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ ಪ ಅಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನಾ1 ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳಗೋಪಿಯರ ಮೇಲೆ ಕಡೆಗಣ್ಣಚೆಲ್ಲುತೊಯ್ಯನೆ ನಡೆದ ಗೋವಳನ 2 ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿತುತ್ತುರೂ ತೂರು ತೂರೆನುತಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿಮೊತ್ತದ ಗೋಪಿಯರನೆಲ್ಲ ಗೋವಳನ 3 ಎಸಳು ಕಂಗಳ ಢಾಳ ಶಶಿ ನೊಸಲ ತಿಲಕಎಸೆವ ಬಿಂಬಾಧರದಪೊಸ ಮುತ್ತಿನೋಲೆ ಮೂಗುತಿ ಹೊನ್ನುಡಿ ಘಂಟೆಎಸೆವ ನೂಪುರ ಹಾಹೆಯ ಗೋವಳನ 4 ಉಂಗುಟದಲಿ ಗಂಗೆಯಂಗಾಲಲವುಂಕೆತುಂಗವಕ್ಷದ ಲಕ್ಷುಮೀಮಂಗಳ ಮಹಿಮ ಭುಜಂಗಶಯನ ಸಿರಿರಂಗವಿಠ್ಠಲ ನೆರೆದ ಗೋವÀಳನ 5
--------------
ಶ್ರೀಪಾದರಾಜರು
ಆದರೇನಾಯಿತು ಹರಿ ಎನ್ನ ಪೊರೆಯಾ ಈ ಧರೆಯೊಳಾರು ಮಾಡದ ದೋಷ ನಾ ಮಾಡಲಿಲ್ಲಾ ಪ ತಾರಾಪತಿಯಂತೆ ಗುರುದ್ರೋಹ ಮಾಡಿದವನಲ್ಲ ವಾರಿಜೋದ್ಬವನಂತೆ ತಪ್ಪಲಿಲ್ಲಾ ಮಾರ ಮಹಿಮನಂತೆ ನಾ ಮಹಿಮನೆಂದು ಹೇಳಲಿಲ್ಲ ಬಾರಿಬಾರಿಗು ನಿನ್ನ ಭಜಿಸುವದೊಂದೆ 1 ತಂದೆ ಮಾತನು ಕೇಳಿ ತಾಯಿ ದ್ರೋಹ ಮಾಡಲಿಲ್ಲ ಬಂಧು ಬಳಗ ದ್ವೇಷ ಮಾಡಿ ಬಾಧಿಸಲಿಲ್ಲ ಅಂಡಜಾಮಿಳನಂತೆ ಅತಿದ್ರೋಹ ಮಾಡಲಿಲ್ಲ ಚಂದದಿಂದಲಿ ನಿಮ್ಮ ಸ್ಮರಿಸುವದೊಂದೆ 2 ಅತಿ ಘಂಟಾಕರ್ಣನಂತೆ ಕರ್ಣಘಂಟೆ ಶಬ್ಧವಿಲ್ಲ ಹಿತದಿ --------ಬ್ರಹ್ಮತ್ಯನಿಲ್ಲ ಸತತ ನೀನೆ ಎನಗೆ ಗತಿಯೆಂದು ಇರುವುದೊಂದೆವಿತರಣಾ ಕೊಂಡರಿಯೆ ವೀರ 'ಹೊನ್ನವಿಠಲಾ’ 3
--------------
ಹೆನ್ನೆರಂಗದಾಸರು
ಆಭರಣಗಳರ್ಪಿಸುವೆನು ಶೋಭನ ಚರಿತಾ ಪ ಮಹಾಭಾಗ್ಯಪ್ರದೆ ನಿನ್ನರಸಿ ಯುಗುಣಭರಿತಾ ಅ.ಪ ಪದನೂಪುರಗಳು ಘಂಟೆ ನಿನದದುಡಿದಾರಾ ಪರಿಯಂತ ವಿಧವಿಧಕರ ಕಂಕಣ ಹತ್ತು ಬೆರಳಿಗುಂಗೂರಾ ಕೌಸ್ತುಭ ಶ್ರೀ ವತ್ಸದ ಶೃಂಗಾರಾ 1 ಕುಂಡಲ ಕರ್ಣದಲ್ಲಿ ತುಳಸಿಯ ವನಮಾಲೆ ಶೋಭಿಪುದು ಕಂಠದಲೀ ಥಳಥಳಿಪುದು ರವಿಯಂತೆ ಕಿರೀಟಶಿರದಲ್ಲಿ ಬೆಳಗುವ ತೇಜೋಮಯ ಗಾನಾವದು ಕೊಡಲಿ 2 ಸ್ಮರ ಶತ ಸುಂದರ ವಿಗ್ರಹ ಕರುಣಾಕರನೇ ಸರಸಿಜಭವ ಜನಕ ಪರಾತ್ಪರ ಮಾಧವನೆ ಶರದಿಂದುನಿಭಾನನ ಸರ್ವತ್ಪ್ರಕಾಶನೇ ಗುರುರಾಮ ವಿಠಲ ಹರಿ ಸರ್ವೋತ್ತಮನೇ 3
--------------
ಗುರುರಾಮವಿಠಲ
ಆರೇ ಸುಳಿದವನಿಂದು|ನೀರೇ ತಂದುವನ ತೋರೇ ಪ ನೀಲಮೇಘದ ಕಾಂತಿಮೈಯ್ಯಾ|ನೋಡೇಮದನಯ್ಯಾ| ಕಾಲಲುಂದಿಗೆ ಹೆಜ್ಜೆಘಿಲು ಘಲುಕೆನುವಾ| ಮೇಲು ಪಿತಾಂಬರ ಝಳ ಝಳಿಸುವ ನವನಾರೇ 1 ಮೆರೆವ ವಡ್ಯಾಣ ಘಂಟೆಸಿರಿಯಾ|ಕವಿಹೊಗಳಲರಿಯಾ| ಬೆರಳುಂಗುರ ಕಡಗ ಕೇಯೂರಾ| ಕೌಸ್ತುಭ ಮಾಲೆಯ ಹೊರವನಾರೇ 2 ಕಡೆಗಣ್ಣನೋಟ ಪದುಮದೆಲಿಯೋ|ಮೋಹನದಾಬಲೆಯಾ| ಕುಂಡಲ ಹೊಳೆವ ಕಪೋಲಾ| ಇಡಿದನೇ ನಗೆಯ ಸುನಾಶಿಕ ಸರಳವನಾರೇ 3 ಮೃಗದ ಪಣಿಯಾಲುಂಗುರ ಗುರುಳೋ|ಕಾವನಸರಳೋ| ಝಗಝಗಿಸುವ ರನ್ನ ಮುಕುಟದ ಚೆಲುವಾ| ಬಗೆ ಬಗೆ ಸೊಬಗಿನ ನವರಸಗರೆವನಾರೇ 4 ತರುಣೀ ಮುನ್ನಿನಸುಕೃತಬಂದು|ವದಗಿ ತಾ ಇಂದು| ಗುರು ಮಹಿಪತಿ ಪ್ರಭು ಚರಣವದೋರಿ|ಮರುಳೆನ್ನಾ ಮಾಡಿದ ದೀನೋದ್ಧಾರಿವನಾರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉತ್ಸವದಲಾಹ್ನಿಕವ ಕಡು ಜನರು ಕೇಳಿರಯ್ಯ ಪ. ಅರುಣ ಉದಯದೊಳೆದ್ದು ಆ ದ್ವಾರಪಾಲಕರುಭರದೆ ಘಂಟೆ ಸುವಿಘ್ನ ಮಾಡೆತರತರದ ಹರಿದಾಸರು ತಾಳ ಮೇಳಗಳಿಂದಪರಿಪರಿಯ ಗಾನ ಪಾಡೆ ತ್ವರಿತ ವಾದ್ಯಗಳಿಂದ ತರುವಾಯ ಭೋರಿಡೆ ಮುರಹರನುಪ್ಪವಡಿಸೆತರುಣ ಯತಿಗಳು ಎದ್ದು ಸ್ನಾನ ಜಪಗಳ ಮಾಡಿನಿರುತ ಶಂಖ ಭ್ರಮಣೆ ಮಾಡೆ ನೀಟಾಗಿಒಪ್ಪುತಿಹ ಉಡುಪಿಯ ಶ್ರೀಕೃಷ್ಣನ 1 ಘೃತ ನೆನೆಕಡಲೆಯುಶುದ್ಧಾದ ಪಾಲ್ಮೊಸರು ಶುಂಠಿ ಸಕ್ಕರೆಲಡ್ಡಿಗೆತಂದ ನೈವೇದ್ಯವ ಸವಿದು ತಾ ಪೂಜೆ ಮಾಡಿಸಿಕೊಂಬ 2 ಪದ್ಮನಾಭಗೆ ಬೇಗ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕವಿಧಿಯ ಪೂರ್ವಕವಾಗಿ ಅಗಿಲು ಗಂಧ ತುಲಸಿಮಾಲೆಅಧಿಕವಾಗಿ ಸಮರ್ಪಿಸಿ ಒದಗಿದ್ದ ಶುಂಠಿ ಬೆಲ್ಲ ಒಳಿತಾದ ಅನ್ನ ಸೂಪದಧಿ ಕ್ಷೀರ ಕದಳಿಫಲವು ಮುರಮರ್ದನನುಚೆಲುವ ತಾ ಹಂಸಪೂಜೆಯ ಕೊಂಬ ತದನಂತರದಲಿ ಮೃತ್ತಿಕೆಯ ತಾ ಗಣಿಯಕಟ್ಟಿಸಿಕೊಂಬ 3 ದಧಿ ದಿವ್ಯ ಮಧು ಸಕ್ಕರೆ ಸೀಯಾಳವು ಇಂ-ದಿರೇಶಗೆ ಬೇಗ ಶಿರದ ಮೇಲ-ಭಿಷೇಕ ಮುದದಿಂದ ಮಾಡಿದ ಬಳಿಕತಿರುಗಿ ನೈವೇದ್ಯವನು ತೀವ್ರದಿಂದಲೆ ಸ-ಮರ್ಪಿಸಿ ಚೆಲುವ ಮಂಗಳಾರತಿಯಿಂದಪಂಚಾಮೃತದ ಪೂಜೆಗೊಂಬ 4 ಜಲಜನಾಭಗೆ ಉಷ್ಣಜಲವ ತಂದ್ಹದ ಮಾಡಿಲಲಿತವಾಗಿ ಎರೆಯುತಒಳಿತಾದ ಹೆಸರ್ಹಿಟ್ಟಿನಲಿ ಒರೆಸಿ ಮೈಯನೆತೊಳೆದು ಸುಲಭಗೆ ಪಾಲನುಣಿಸಿ ಬಳಿಕಬಾಲಉಡಿಗೆಯಿಟ್ಟು ಬಹುನೈವೇದ್ಯವನರ್ಪಿಸಿಚೆಲುವ ಉದ್ವಾರ್ಚನೆ ಪೂಜೆಚೆಂದಾಗಿ ಮಾಡಿಸಿಕೊಂಬ 5 ಮಧ್ವ ಸರೋವರಜಲವು ಹೊಳೆವÀ ಚಿನ್ನ ಕಲಶÀದಲಿಶುದ್ಧದಲಿ ಶೋಧಿಸಿ ತುಂಬಿಸಿಬದ್ಧ ಘಂಟೆನಾದದಲಿ ಬಹುಬೇಗದಲಿಬಂದು ಸನ್ನಿಧಿಯಲಿ ಪೂಜಿಸಿವಿಧುರಥನೆ ಶಂಕರಥನೆ ಪುರುಷಸೂಕ್ತÀದಭಿಷೇಕಮುದದಿಂದ ಮಾಡಿದ ಬಳಿಕ ಸಜ್ಜಿ ಘೃತದೋಸೆ ಬೆಣ್ಣೆ ಸಾರು ನೈವೇದ್ಯವ ಸವಿದು ಚೆಲುವಮಂಗಳಾರತಿಯಿಂದ ಮುದದಿ ತೀರ್ಥಪೂಜೆಗೊಂಬ 6 ಉರು ಪದಕಾಭರಂಣಗಳು ಉನ್ನಂತತೋಳ್ಬಂದಿಕರಮುದ್ರೆ ಕಂಕಣಗಳು ಚರಣಾರವಿಂದಗಳಿಗೆ ಚಾರುಚಿನ್ನದ್ಹಾವಿಗೆಕಿರುಗೆಜ್ಜೆ ಕಾಲಲಂದುಗೆವರ ಪೀತಾಂಬರ ಕಟಿಗೆ ವಡ್ಯಾಣ ನೇವಳ ಇಟ್ಟುನಿರುತ ಸುವರ್ಣದ ಕವಚವುಕೊರಳ ಕೌಸ್ತುಭಹಾರ ಕೋಮಲ ಸುವರ್ಣಕುಂಡಲಸಿರಿಮೂರುತಿ ಸಣ್ಣ ನಾಮ ಶಿರದ ಜಾವಳ ಜಡೆ ಕಡಗೋಲು ನೇಣುಸಹಿತ7 ದಧಿ ಶುಂಠಿ ನಿಂಬೆರಸ ತಕ್ರಜಗದೇಕ ಸವಿದ ಪರಿಯ 8 ಬಗೆಬಗೆಯ ಮಂಗಳಾರತಿ ಬಾರಿಬಾರಿಗೆ ಮಾಡಿ ಚಾ-ಮರ ದರ್ಪಣಗಳೆಸೆಯೆ ನಗೆಮುಖದ ಕೃಷ್ಣ-ನಂಘ್ರಿಗೆ ಷೋಡಶ ಪೂಜೆಯ ಮಾಡಿಮುಗಿಸಿ ಗುರುರಾಯ ಬರಲುಹನುಮಂತದೇವರಿಗೆ ಹಸನಾದ ಭಕ್ಷ್ಯಭೋಜ್ಯಅನುದಿನದಲರ್ಪಿಸಿ ಪೂಜಿಸಿಮುನಿ ಮಧ್ವರಾಯರಿಗೆ ಮುದದಿಂದಲರ್ಪಿಸಿ9 ಅರಳು ಆರಚ್ಚು ಬೆಲ್ಲವುಆ ಕಾಲದಲರ್ಪಿಸಿ ಪೂಜಿಸಿ ಕರಣದಲಿ ನೋಡಿ ನಗುವ 10 ಪುಟ್ಟ ಕೃಷ್ಣರಾಯರಿಗೆ ಹೊನ್ನ ಕವಚವ ತೊಡಿಸಿಇಟ್ಟ ರನ್ನದ ಕಿರೀಟವುದಿಟ್ಟಾದ ಪದಕಂಗಳು ದಿವ್ಯಮುತ್ತಿನ ಸರಕಟ್ಟಿದ್ದ ಪೂಮಾಲೆ ಎಸೆಯೆಶ್ರೇಷ್ಠವಾದ ಧೂಪದೀಪ ಶ್ರೀಪತಿಗೆ ದೋಸೆ ಬೆಣ್ಣೆಗಟ್ಟುರುಳಿ ನೈವೇದ್ಯವು ಕಟಕಟನೆಶುಂಠೀಕಷಾಯುಂಡು ಬಾಯಿ ತೊಳೆದುತಟ್ಟನೆ ರಾತ್ರಿ ಪೂಜೆಯಗೊಂಡು ತಾ ಪಲ್ಲಕ್ಕಿಯೇರಿ ಬರುವ11 ಅರಳು ಬಹುಕೊಬರಿ ಚೂರುಗಳು ಆ ಕಾಲದಲಿ ಸೂಸಿ ಪೂಜಿಸೆ ಕರುಣದಲಿ ನೋಡಿ ನಗುವ 12 ಧೀರನಿಗೆ ಚತುರ್ವೇದ ದಿವ್ಯಶಾಸ್ತ್ರಪುರಾಣ ಚೆಲುವಗಷ್ಟಕ ಗೀತವುಭೇರಿಮೌಳಿ ಮೌಳಿವಾದ್ಯಮೌಳಿಮೌಳಿ ಚಕ್ರವಾದ್ಯತಾರತಮ್ಯದ ಸರ್ವವಾದ್ಯಗಳೆಸೆಯೆತಾರಿ ಸೇವೆಯ ಮಾಡಿ ಸ್ವಾಮಿ ವೀಳ್ಯ ಮಂತ್ರಾಕ್ಷತೆ ಕಾರುಣ್ಯದಲಿಬೆರೆಸಿ ಮಾರಜನಕಗೆ ಏಕಾಂತ ಸೇವೆಯ ಮಾಡಿ ನವಮಾರಜನಕನ ಹಂಪೂಜೆಯ ಜಾಗ್ರತೆಯಲಿ ನೋಡಿ ನಗುವ 13 ಹಡಗಿನಿಂದಲಿ ಬಂದು ಕಡಲ ತಡಿಯಲಿ ನಿಂದುಬಿಡದೆ ಯತಿಗಳ ಕೈಯ ಬಿಂಕದಿ ಪೂಜೆಗೊಂಬಆದಿ ಕೃಷ್ಣನ ಆಹ್ನಿಕವನು ಆಧಾರದಲಿಓದಿವಿನೋದದಲಿ ಪಠಿಪ ಜನರಿಗೆಆಧಿವ್ಯಾಧಿಗಳಟ್ಟಿ ಬಹು ಭಾಗ್ಯಗಳ ಕೊಡುವಮಾಧವನ ಕೃಪೆಯಿಂದಲಿವಾದಿರಾಜರಿಗೊಲಿದು ವಚನ ಶುದ್ಧೋಕ್ತದಲಿ ಹೇಳುವ ಜನರಿಗೆಬರುವ ದುರಿತವ ಕಳೆದು ಮೇಲಾಗಿ ರಕ್ಷಿಸಿಕೊಂಬ ಹಯವದನ 14
--------------
ವಾದಿರಾಜ
ಏನು ಮಾಡಲಯ್ಯ ಬಯಲಾಸೆ ಬಿಡದು ಪ ಮಾನವ ಮೃಗೇಂದ್ರ ರಾಮಚಂದ್ರ ರಕ್ಷಿಸಯ್ಯ ಅ ಜ್ಯೋತಿರ್ಮಯವಾದ ದೀಪದ ಬೆಳಕಿಗೆ ತಾನುಕಾತರಿಸಿ ಬೀಳುವ ಪತಂಗದಂದದಲಿಧಾತುಗೆಟ್ಟು ಬೆಳ್ಳಿ ಬಂಗಾರದಲಿ ಮೆರೆವಧೂರ್ತೆಯರ ನೋಡುವೀ ಚಕ್ಷುರಿಂದ್ರಿಯಕೆ 1 ಅಂದವಹ ಸಂಪಗೆಯ ಅರಳ ಪರಿಮಳವುಂಡುಮುಂದುವರಿಯದೆ ಬೀಳ್ವ ಮಧುಪನಂತೆಸಿಂಧೂರ ಗಮನೆಯರ ಸಿರಿಮುಡಿಯೊಳಿಪ್ಪ ಪೂಗಂಧ ವಾಸಿಸುವ ಘ್ರಾಣೇಂದ್ರಿಯಕೆ 2 ಗಾಣದ ತುದಿಯೊಳಿಪ್ಪ ಭೂನಾಗನಂ ಕಂಡುಪ್ರಾಣಾಹುತಿಯೆಂದು ಸವಿವ ಮೀನಿನಂತೆಏಣಾಕ್ಷಿಯರ ಚೆಂದುಟಿಯ ಸವಿಯ ಸವಿಸವಿದುಜಾಣತನದಲಿ ನಲಿವ ಜಿಹ್ವೇಂದ್ರಿಯಕೆ 3 ದಿಮಿದಿಮ್ಮಿ ಘಣಘಣಾ ಎಂಬ ಘಂಟೆಯ ರವಕೆಜುಮುಜುಮನೆ ಬೆಮೆಗೊಳ್ಳುವ ಹರಿಣದಂತೆರಮಣಿಯರ ರಂಜಕದ ನುಡಿಗಳನು ಕೇಳಿ ಪ್ರ-ಣಮವೆಂದು ತೋಷಿಸುವ ಕರ್ಣೇಂದ್ರಿಯಕೆ 4 ತ್ವಕ್ಕು ಮೊದಲಾದ ಪಂಚೇಂದ್ರಿಯಗಳೊಳು ಸಿಕ್ಕಿಕಕ್ಕುಲಿತೆಗೊಂಬುದಿದ ನೀನು ಬಿಡಿಸೊಸಿಕ್ಕಿಸದಿರು ಸಿಕ್ಕಿಗೆ ಆದಿಕೇಶವರಾಯದಿಕ್ಕಾಗಿ ನಿನ್ನಂಘ್ರಿಯೊಳೆನ್ನ ಮನವನಿರಿಸೊ 5
--------------
ಕನಕದಾಸ
ಕೃಷ್ಣಲೀಲೆ ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ಪ ಆನೆ ಬರುತಾದೆ ಎಲ್ಲರು ನೋಡಿರಿ ಒಂ-ದಾನೆಯ ಕೊಂದ ಮದ್ದಾನೆಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿತಾನೇ ತಾನಾಗಿ ಮದ ಸೊಕ್ಕಿದಾನೆಅ ನೀರ ಮುಳುಗಿ ಖಳನ ಕೊಂದು ವೇದ ತಂದುಬರಮದೇವಗಿತ್ತ ಮದ್ದಾನೆಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದಜಾರ ಕೃಷ್ಣನೆಂಬ ಸೊಕ್ಕಿದಾನೆ 1 ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆಕುಸುಮಶರನ ಪೆತ್ತ ಮದ್ದಾನೆದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದದಶರಥಸುತನೆಂಬ ಮದ ಸೊಕ್ಕಿದಾನೆ 2 ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟುಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ 3 ಸಾವಿರ ತೋಳವನ ಸರಸದಿಂದಲಿ ಕಡಿದಭುವನ ರಕ್ಷಕನಾದ ಮದ್ದಾನೆಯೌವನದ ಗೋಪಿಯರ ಕಣ್ಮಣಿ ಎನಿಪ ವಸುದೇವಸುತನೆಂಬ ಮದ ಸೊಕ್ಕಿದಾನೆ 4 ಗರುಡವಾಹನವೇರಿ ಧಿಮಕೆಂದು ಬರುತಾನೆಸರುವ ಲೋಕರಕ್ಷಕನೆಂಬ ಮದ್ದಾನೆಉರೆ ಪೂತನಿಯ ಹೀರಿ ಮಾವ ಕಂಸನ ಕೊಂದಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ 5
--------------
ಕನಕದಾಸ
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ
ಗೋಪಿ ಸುಕೃತ ಪ ಸುಕೃತ 1 ಕೌಸ್ತುಭ ಸುಕೃತ 2 ಕಸ್ತೂರಿಯಿಟ್ಟು ಕಂಗಳಿಗೆ ಕಾಡಿಗೆ ಹಚ್ಚಿಮತ್ತೆ ಕದಪಿನಲಿ ಕುಂಕುಮವನೊತ್ತಿಮುತ್ತಿನಂದದೊಳಿರುವ ಬೆವರ ಸೆರಗಿನೊಳೊರೆಸಿಮುತ್ತು ತಾರೈಯೆಂದು ಮುದ್ದಾಡುವೋ ಸುಕೃತ3 ಅಸುರಕುಲ ಹರಣನಿಗೆ ಅಂಗಿಯನು ತೊಡಿಸಿ ಬಲುಕುಶಲದಿ ಪೀತಾಂಬರವನ್ನು ಉಡಿಸಿಪೊಸ ರತುನ ಬಿಗಿದ ಮಣಿಮಯದ ಮಕುಟವ ಮಂಡೆ-ಗೊಸವಿಟ್ಟು ನಲಿ ನಲಿದು ಮುದ್ದಾಡುವೊ ಸುಕೃತ4 ಶಂಖ ಚಕ್ರಾಂಕಿತಗೆ ಭುಜಕೀರ್ತಿಯನೆ ಧರಿಸ್ಯ-ಲಂಕಾರದಲಿ ತಾರೆ ಮಣಿಯ ಕಟ್ಟಿಕಂಕಣವು ಕಡಗ ಥಳಥಳಿಪ ಪವಳದಿ ರಚಿಸಿಬಿಂಕದಲಿ ತೊಟ್ಟಿಲೊಳಗಿಟ್ಟು ತೂಗುವ ಸುಕೃತ5 ಮುಂಗೈಯ ಮುರಿ ಮುತ್ತಿನುಂಗುರವು ಥಳಥಳಿಸೆರಂಗು ಮಾಣಿಕದ ಒಡ್ಯಾಣ ಹೊಳೆಯೆಕಂಗೊಳಿಸುತಿಹ ಕಾಂಚಿದಾಮವಲಂಕರಿಸಿ ಸ-ರ್ವಾಂಗದೊಳು ಗಂಧ ಪರಿಮಳವ ಸೂಸುವ ಸುಕೃತ6 ಕಡಗ ಪೊಂಗೆಜ್ಜೆ ಕನಕದ ಘಂಟೆ ಸರಪಳಿಯಬಿಡದೆ ಶ್ರೀಹರಿಯ ಚರಣದಲ್ಲಿ ಧರಿಸಿಪೊಡವಿಯನು ಅಳೆದ ಶ್ರೀಪುರುಷೋತ್ತಮನಿಗೆ ಮೆ-ಲ್ಲಡಿಯನಿಡು ಎಂದೆನುತ ನಡೆಯ ಕಲಿಸುವ ಸುಕೃತ7 ನೆಲನ ಈರಡಿಮಾಡಿ ಬಲಿಯ ಮೆಟ್ಟಿದ ಪಾದಚೆಲುವ ಚರಣದಿ ಭೂಮಿಯಳೆದ ಪಾದಶಿಲೆಯೆಡಹಿ ಬಾಲೆಯನು ಮಾಡಿದ ದಿವ್ಯವಾದಒಲಿದಿಟ್ಟು ನಡೆಯೆಂದು ನಡೆಯ ಕಲಿಸುವ ಸುಕೃತ8 ಅಂದಿಗೆ ಪಾಯ್ವಟ್ಟು ಕುಂದಣದ ಕಿರುಗೆಜ್ಜೆಸಂದಣಿಸಿ ಕಿರಿಬೆರಳೊಳುಂಗುರಗಳುಚೆಂದದ ಕಡಗ ಪಾಡಗ ಘಂಟೆ ಸರಪಣಿಯುಮಂದಗಮನನ ಪಾದಪದ್ಮಕ್ಕಿಡುವೊ ಸುಕೃತ9 ಸುಕೃತ 10 ದಿನಕರ ನಿಭಾಂಗ ಕೇಶವ ರಾಮಚಂದ್ರ ಮುನಿಸನಕಾದಿವಿನುತ ಕುಣಿದಾಡು ಎನುತತನ್ನ ಕರಗಳಲಿ ತಕ್ಕೈಸಿ ಕೃಷ್ಣನ ದಿವ್ಯಘನ್ನ ಚರಿತೆಯ ಪಾಡಿ ಪೊಗಳುವ ಸುಕೃತ11
--------------
ವ್ಯಾಸರಾಯರು
ಚನ್ನಕೇಶವ ನಿನ್ನ ಭಜನೆಯೊಂದುಳಿದು ನಾ ನನ್ಯರ ನಂಬೆನು ಸಲಹಯ್ಯ ಹರಿಯೇ ಪ ತರಳಾ ಧೃವನಂತೆ ತಪಸ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಸರಸ ಜಾಂಬುಕಿಯಂತೆ ಸೇವೆಯನರಿಯೆನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೇ 1 ದಾಸ ಕನಕನಂತೆ ಭಕ್ತಿಯ ನರಿಯೆನು ವಾಸುಕಿಯಂತೆ ನಾ ಯಾಚನೆಯರಿಯೇ ದಾಸ ಮಾರುತಿಯಂತೆ ದಾನತ್ವವರಿಯೆನು ವಾಸವನಂತೆ ನಾ ಕೀರ್ತನೆಯರಿಯೇ 2 ಹರಿಯ ಲೀಲೆಗಳನ್ನು ಒಂದಿಷ್ಟನರಿಯೆನು ಹರಿ ಪೂಜೆ ಸೇವೆಯ ಸ್ಮರಣೆಯನರಿಯೇ ಹರಿಯ ಮನೆ ಘಂಟೆಯ ಬಾರಿಸಲರಿಯೆನು ಸಿರಿ ಚನ್ನಕೇಶವ ಮಹಿಮೆಯನರಿಯೇ 3
--------------
ಕರ್ಕಿ ಕೇಶವದಾಸ
ಜಯಮಂಗಳಂ ಶುಭೋದಯ ಮಂಗಳಂ ಭಯಹರಗೆ ತಿರುಪತಿಯ ವೆಂಕಟೇಶ್ವರಗೆ ಪ ಸುರಲೋಕವನು ಪಡೆದ ಶಿರದಮಕುಟದ ಪ್ರಭೆಗೆ ಸ್ಮರಚಾಪವನು ಪೋಲ್ವ ಪುರ್ಬುಗಳ ಚೆಲುವಿಕೆಗೆ ತುಂಬಿ ತುಳುಕುವ ನಯನಗಳಿಗೆ 1 ಕನಕಕುಂಡಲಗಳಿಗೆ ಘನ ನಾಸಿಕದ ಮಣಿಗೆ ಮಿನುಗುತಿಹ ಮುಗುಳುನಗೆಯೊಗುವ ಮುಖಕೆ ಇನಕೋಟಿಪ್ರಭೆಗೆ ಮಿಗಿಲೆನಿಪ ಕೌಸ್ತುಭಮಣಿಗೆ ವನಮಾಲೆಯನು ಧರಿಸಿ ಶೋಭಿಸುವ ಕಂಠಕೆ 2 ಭುಜವೆರಡರಲಿ ಶಂಖಚಕ್ರಗಳನುರೆ ಧರಿಸಿ ಅಜಸುರಾದ್ಯರು ಬಿಡದೆ ಭಜಿಪ ಪದವ ಭಜಿಪರಿಗೆ ಭವಶರಧಿ ಕಟಿಪ್ರಮಾಣವಿದೆಂದು ಅಜಪಿತನು ತೋರುತಿಹ ಕರಚತುಷ್ಟಯಕೆ 3 ಹದಿನಾಲ್ಕು ಲೋಕಕಾಶ್ರಯವಾಗಿ ತೋರುತಿಹ ಪದುಮಭವನನು ಪಡೆದ ನಾಭಿಸಹಿತ ಉದರಮಂಡಲಕೆ ಮತ್ತದರಡಿಯ ಶೋಭಿಸುವ ಹದಿನಾರು ಬಣ್ಣದಪರಂಜಿ ಕಟಿಸೂತ್ರಕೆ 4 ಕಿರಿಘಂಟೆಸರದೊಡನೆ ಹೊಳೆವ ಪೀತಾಂಬರಕೆ ಗರುಡನಂಸದಿ ಮೆರೆವ ಊರುಗಳಿಗೆ ಸುರನದಿಯ ನೆರೆ ಪಡೆದ ಚರಣದುಂಗುಟಗಳಿಗೆತಿರುಪತಿಯ ವೆಂಕಟನ ದಿವ್ಯ ಮೂರುತಿಗೆ 5
--------------
ತಿಮ್ಮಪ್ಪದಾಸರು