ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಸಾಧನದ ಗೋಜ್ಯಾಕೆ ನಿನ್ನ ಭಾವದೊಳಗೆ ಹರಿಯಿರಲಿಕ್ಕೆ ಪ ಜಾವಜಾವಕೆ ಗೋವಳರೊಡೆಯನ ಕೇವಲಭಕ್ತಿಯಿಂ ಕೂಗಲು ಸಾಲದೆ ಅ.ಪ ಎಷ್ಟು ಆಸನ್ಹಾಕಿದರೇನೋ ಬಲು ಕಷ್ಟದಿ ದೇಹದಂಡಿಸಲೇನೋ ಬೆಟ್ಟವೇರಿ ಕೂತರೆ ಏನೋ ಅನ್ನ ಬಿಟ್ಟು ಉಪವಾಸ ಮಲಗಿದರೇನೋ ಕಷ್ಟಹರಣ ಮಹ ಶಿಷ್ಟಪಾಲನೆಂದು ನಿಷ್ಠೆಯಿಂ ಭಜಿಸಲಿ ಸಾಕಾಗದೇನೋ 1 ತೊಪ್ಪಲ ತಿಂದು ಬಾಳಿದರೇನೋ ಮತ್ತು ತಿಪ್ಪೆಯೊಳಗೆ ಉಣಕೂತರೇನೊ ಕಪ್ಪೆಯಂತೆ ಜಲ ಮುಳುಗಿದರೇನೋ ಎಲೊ ಮುಪ್ಪಿನ್ಹದ್ದಿನಂತೆ ಮೇಲಕ್ಹೋದರೇನೋ ಅನುದಿನ ಮುಪ್ಪುರಾಂತಕನ ಗೌಪ್ಯದಿಂ ನೆನೆಯಲು ಸಾಕಾಗದೇನೊ 2 ಸೊಟ್ಟಿ ಹಾಕಿಕೊಂಡು ಪೋದರೇನೋ ಚರ್ಮ ಉಟ್ಟುಕೊಂಡು ತಿರುಗಿದರೇನೋ ಬಟ್ಟಿ ನುಂಗಿ ದೇಹ್ಯ ತೊಳೆದರೇನೋ ಬಲು ಕಷ್ಟದೆಷ್ಟು ಸಾಧಿಸಲೇನೋ ಕೆಟ್ಟಗುಣವ ಬಿಟ್ಟು ದಿಟ್ಟ ಶ್ರೀರಾಮನ ಗಟ್ಟ್ಯಾಗಿ ನಂಬಲು ಮುಕ್ತಿಕಾಣೊ 3
--------------
ರಾಮದಾಸರು
ಓಡಿ ಬಾ ನಿನ್ನ ಎತ್ತಿ ಮುದ್ದಾಡುವೆ ನಾಗಶಯನ ರಂಗನೇ ಪ. ನಾಗಶಯನ ರಂಗನೆ, ನಾಗಶಯನ ರಂಗನೇ ಅ.ಪ. ಕುಣಿ ಕುಣಿಯುತ ಗೆಜ್ಜೆ ಝಣ ಝಣರೆನೆÀ್ನ ಕೃಷ್ಣಾ ಫಣಿಶಾಯಿ ನಿನ್ನ ನಾ ಕ್ಷಣದಲ್ಲಿ ಬಿಗಿದೂ 1 ಚಿನ್ನರೊಡನೆಗೂಡಿ ಮಣ್ಣನೆ ಮೆಲ್ಲದಿರೂ ಕೃಷ್ಣಾ ಅಣ್ಣಯನೊಡನಾಡೊ ಚಿನ್ನ ಗೋಪಾಲನೇ 2 ಗೋಪಿಯರೊಡನಾಡಿ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠಲ ಗೋವಳರೊಡೆಯ 3
--------------
ಅಂಬಾಬಾಯಿ
ಪಿಡಿದೆತ್ತೊ ಕೈಯ್ಯಾ ಕೃಷ್ಣಯ್ಯ ಪ ಪಿಡಿದೆತ್ತೊ ಕೈಯ್ಯಾ ಪಾಲ್ಗಡಲೊಡೆಯನೆ ಭವ ಕಡಲಿನೊಳಗೆ ಬಿದ್ದು ಬಾಯ್ಬಿಡುವೆ ಬೇಗದಿ ಬಂದು ಅ.ಪ ತಾವರೆನಾಭಾ ಕಾವದÀು | ಎನ್ನ ಜೀವನಲಾಭಾ ಶ್ರೀವ್ಯಾಸಮುನಿಗೊಲಿದವ | ನೆಂದರಿತು ಬಂದೆ ಶ್ರೀವೇಣುಗೋಪಾಲಕೃಷ್ಣ | ಗೋವಳರೊಡೆಯ ಭಾವ ಭಕುತಿಗಳೊಂದನರಿಯೆನು ಹೇವವಿಲ್ಲದೆ ದಿನವ ಕಳೆದೆನು ಸಾವಧಾನವ ಮಾಡಲಾಗದು ಶ್ರೀವರನೇ ನವವಿಧ ಭಕುತಿ ನೀಡುತ 1 ಅನುಮಾನವ್ಯಾಕೆ | ನೀನೆ ಗತಿ ಎನುವೆನು ಬಲ್ಲಿ ಅನುದಿನ ಸೇವಿಪೆ ಅನಘನೆ | ಎನ್ನಘ ಗಣನೆ ಮಾಡದೆ ಮುನ್ನ ಅನುವಾಗಿ ಪಾಲಿಸೊ ಮಾನವೇದ್ಯನೆ ಮನದಿ ನಿರ ತನುದಿನದಿ ನಿನ್ನಯ ಧ್ಯಾನವಿತ್ತು ಮನೋವಿಷಾದವನಳಿಯೆ ನಿನ್ನನು ಮರೆಯೆನುಪಕೃತಿ ಸತತ ಸ್ಮರಿಸುವೆ 2 ಶ್ರೀ ನರಹರಿಯೆ ಭಕುತಜನ | ವನಜದಿನಮಣಿಯೆ ಸಾನುರಾಗದಿ ಕೇಳ್ವೆ | ಹನುಮನ ಮತದಲ್ಲಿ ಅನುಚಾದ ಜ್ಞಾನವ | ಕನಸಿನಲಿ ಮನಸಿನಲಿ ಜನನಿ ಜನಕ ತನುಜೆ ವನಿತೆಯಾ ತನುವಿನಲಿ ನೆಲೆಸಿರುವ ಭ್ರಾಂತಿಯ ಹೀನಗೈಸಿ ಮನೋಭಿಲಾಷೆಯ ಭಾರ ನಿನ್ನದು 3
--------------
ಪ್ರದ್ಯುಮ್ನತೀರ್ಥರು
ಬಲು ಚಂದ ಮಹದಾನಂದ ಶ್ರೀಹರಿ ಭಜನೆ ಪ ಬಲು ಚಂದ ಬಲು ಚಂದ ಮಹದಾನಂದ ಜಲಜನಾಭನ ನಾಮ ನಲಿನಲಿದ್ಹೊಗಳ್ವುದು ಅ.ಪ ಬಲಿಯ ಕಾಯ್ದನ ನಾಮ ಬಲು ಚಂದ ಲಲನೆಗೊಲಿದನ ಧ್ಯಾನ ಆನಂದ ಕಲುಷಹರಣ ಕರಿಪಾಲನೆಂದೊದರಲು ಗಳಿಲನೆ ಪರಿಹಾರ ಭವಬಂಧ 1 ಮಾವಮರ್ದನನಾಮ ಬಲು ಚಂದ ಗೋವಳರೊಡೆಯನ ಧ್ಯಾನ ಆನಂದ ಗೋವುಪಾಲನೆಂದು ಭಾವಿಸಿ ಕೂಗಲು ಸಾವು ಹುಟ್ಟು ಇಲ್ಲ ಎಂದೆಂದು 2 ಕಾಮಪಿತನ ನಾಮ ಬಲು ಚಂದ ಕಾಮಿತಾರ್ಥನ ಧ್ಯಾನ ಆನಂದ ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪಾದ ನೇಮದಿ ನುಡಿಯೆ ಮುಕ್ತಿಪದ ಆನಂದ 3
--------------
ರಾಮದಾಸರು