ಒಟ್ಟು 7 ಕಡೆಗಳಲ್ಲಿ , 3 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ಬಾರದೆ ವಿಠ್ಠಲಾ | ಶ್ರೀ ಪಾಂಡುರಂಗ ಪ. ಸ್ಮರಣೆ ಮಾಡುತ ಪೊರೆ ಎಂದೆನ್ನುತ ವರಲುವಾ ಧ್ವನಿ ಕೇಳದೇ ಈ ಪರಿಯ ಗರ್ವವಿದೇನೊ ಹರಿಯೆ ಅ. ದೂರದಿಂದಲಿ ಬಂದೆನೋ | ಇಲ್ಲಿಂದ ಮುಂದೆ ದಾರಿ ಕಾಣದೆ ನಿಂದೆನೋ ದ್ವಾರಕಾಪತಿ ನೀನಲ್ಲದಿ ನ್ನಾರು ಕಾಯುವರೀಗ ಪೇಳು ಸಾರಿದೆನು ನಿನ್ನಂಘ್ರಿ ಕಮಲವ ಚಾರು ಚರಿತನೆ ಮಾರನೈಯ್ಯ 1 ತನುಸುಖ ಬೇಡಲಿಲ್ಲಾ | ನಿನ್ನ ನಾನು ಘನವಾಗಿ ಕಾಡಲಿಲ್ಲ ಮನದ ಹಂಬಲ ನೀನೆ ಬಲ್ಲೆಯೊ ಮನಕೆ ತಾರದೆ ಸುಮ್ಮನಿಪ್ಪೆಯೋ ಎನಗೆ ಪ್ರೇರಕ ನೀನೆ ಅಲ್ಲವೆ ನಿನಗೆ ದಾಸಳು ನಾನು ಅಲ್ಲವೆ 2 ಕರೆಕರೆ ಪಡಿಸುವುದೂ | ಸರಿಯಲ್ಲ ನಿನಗೆ ಕರಿವರದ ಕೇಳು ಇದೂ ನರಸಖನೆ ದಯದಿಂದ ನಿನ್ನ ಚರಣ ದರುಶನವಿತ್ತೆ ಒಲಿದು ಕರಪಿಡಿದು ಸಲಹೆಂದರೀಗ ತೆರೆದು ನೋಡದೆ ನೇತ್ರವಿರುವರೆ 3 ಜ್ಞಾನಿ ಹೃತ್ಕಮಲವಾಸ | ಶ್ರೀ ರುಕ್ಮಿಣೀಶ ಭಾನುಕೋಟಿ ಪ್ರಕಾಶ ನೀನೆ ಗತಿ ಇನ್ನಿಲ್ಲ ಅನ್ಯರು ಸಾನುರಾಗದಿ ಸಲಹೊ ಎನ್ನಲು ಆನನದಿ ಈಕ್ಷಿಸದೆ ನಿಂತರೆ ಮಾನ ಉಳಿವುದೆ ಭಕ್ತವತ್ಸಲ 4 ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು ಅಷ್ಟು ಭಾಗ್ಯವನೂ ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ ದೃಷ್ಟಿ ಬಿದ್ದರೆ ಕಷ್ಟ ಉಂಟೆ ಕೊಟ್ಟು ಅಭಯ ಪೊರೆ ಗೋಪಾಲ- ಕೃಷ್ಣವಿಠ್ಠಲ ಮನದಿ ತೋರೋ5
--------------
ಅಂಬಾಬಾಯಿ
ಕೃಷ್ಣಾರ್ಯರು ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ 1 ಇಂದು ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ- ವಿಠಲರೇಯಾನವಲಿಸು ಬಿಡದೆ 2 ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ 3 ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ4 ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ 5 ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ 6
--------------
ತಂದೆವರದಗೋಪಾಲವಿಠಲರು
ದಾಸರೆಂದು ಕರೆದ ಮಾತ್ರದಿ | ಈಗ ಎಮ್ಮ ದೋಷರಾಶಿ ನಾಶವಾಯಿತು ಪ. ಶ್ರೀಶ ತಾನು ಗುರುಗಳಿಂದ ಈ ಶರೀರಕೀ ಜನ್ಮದಲಿ ದಾಸತನದ ಪೆಸರನಿಟ್ಟು ವಾಸುದೇವ ಕಾಯ್ದ ಎನ್ನ ಅ.ಪ. ಏಸು ಜನ್ಮ ಯತ್ನ ಗೈಯ್ಯಲು | ಭೃತ್ಯಭಾವ ಪಾಶ ದುರ್ಲಭವು ಸುಜನಕೆ ಶ್ರೀಶನನುಗ್ರಹದ ಬಲದಿ ಈಸು ನಾಮ ದೊರೆಯಬೇಕು ಆಶಪಾಶ ತೊಲಗಿ ಭವ ಕ್ಲೇಶ ಕೊನೆಗಾಣಿಸುವುದು 1 ಪಂಡಿತನೆಂದೆನಿಸಿ ಮೆರೆಯಲು | ಜಗದೊಳಗೆ ಕಂಡಮಾತ್ರ ಗರ್ವ ಕಾರಣ ಮಂಡೆಬಾಗಿ ಹರಿಗೆ ನಿನ್ನ ತೊಂಡನೆಂದು ನಮಿಸೆ ನಲಿದು ಪುಂಡರಿಕಾಕ್ಷ ತಾನು ತಂಡ ತಂಡ ಪಾಪ ಕಳೆವ 2 ಹರಿಯದಾಸರೆಂದು ಎನಿಸಲು | ಧರೆಯೊಳಗೆ ಸುರರು ಬಯಸಿ ಬರುತಲಿಪ್ಪರು ಸರ್ವದೇವತೆಗಳು ಬಂದು ಹರಿಯದಾಸರೆನಿಸಿ ಮೆರೆದು ಪರಿಪರಿಯ ತತ್ವ ತಿಳುಹಿ ಹರಿಯ ಪುರಕೆ ತೆರಳಲಿಲ್ಲೆ 3 ದಾಸತನಕೆ ಅಧಿಕವಿಲ್ಲವು | ಸಾಧನವು ದಾಸತನವು ಗರ್ವವಳಿವಳಿವುದು ದಾಸ ದಾಸ ದಾಸ ನಿನಗೆ ವಾಸುದೇವ ಸಲಹೊ ಎನಲು ದೋಷನಾಶಗೈಸಿ ಹರಿಯು ದಾಸ ಜನರ ಕಾಯ್ದ ದಯದಿ 4 ಅಷ್ಟು ಭಾಗ್ಯಕಧಿಕ ಲಾಭವು | ದಾಸತನವು ಶ್ರೇಷ್ಠ ಗುರುಗಳಿಂದ ದೊರಕಿತು ಇಷ್ಟವೆನಗೆ ದಾಸಪೆಸರು ಶಿಷ್ಟರೆಲ್ಲ ಕರೆಯಲೀಗ ತುಷ್ಟಿಪಡುವೆ ಶ್ರೀ ಗೋಪಾಲ-ಕೃಷ್ಣವಿಠಲ ಸಲಹೊ ಎಂದು 5
--------------
ಅಂಬಾಬಾಯಿ
ಪರಮ ಕರುಣಾಳುಗಳು ಈ ಗುರುಗಳು ಶ್ರೀ ವರತಂದೆ ಮುದ್ದುಮೋಹನವಿಠಲಾಖ್ಯರು ಪ. ಶಾಂತರು ದಾಂತರು ಸಂತೋಷ ಸುಖಿಗಳು ಅಂತರಂಗದಿ ಹರಿಯ ಧ್ಯಾನಿಸುವರು ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು 1 ನಿರಪೇಕ್ಷೆಯಿಂದಲಿ ಪರರಿಗುಪಕಾರವನು ತೆರವಿಲ್ಲದೆಲೆ ಸತತ ಮಾಡುತಿಹರು ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು 2 ಸುಪ್ರೀತರಾಗಿನ್ನು ಈ ಶರೀರದ ಒಳಗೆ ಶ್ರೀಪತೀ ತೈಜಸನ ವ್ಯಾಪಾರದಿ ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು3 ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ ನಿಲ್ಲದೇ ಮನಸು ಬಹು ತಲ್ಲಣಿಸುತಿರಲು ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು 4 ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ- ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು 5
--------------
ಅಂಬಾಬಾಯಿ
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ಪ. ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು ಮುಕ್ತಿದಾಯಕ ದೇವ ಮುನಿವರದ ಕಾವ ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು 1 ಭಾರ ಬೆನ್ನೊಳು ವಹಿಸಿ ಕೋರೆ ಹಲ್ಲನು ತೆರೆದು ಕಂಭದಲಿ ಬಂದ ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ ವೀರ ರಾವಣನಸುವ ಹೀರಿದ ಹರಿಯು 2 ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ- ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ 3
--------------
ಅಂಬಾಬಾಯಿ
ಶ್ರೀ ವೆಂಕಟೇಶ ಪಾಹಿ-ತಾವಕ ಭಕ್ತಿಂದೇಹಿ ಪ ವಾರಿಜನೇತ್ರಾ-ವಾರಿದಗಾತ್ರಾ ನಾರದಸನ್ನುತ ಪಾತ್ರ ನರಮಿತ್ರ ಸುಚರಿತ್ರ 1 ಅಂಡಜಯಾನ-ಕುಂಡಲಿ ಶಯನ | ಖಂಡಪರಶು ಪರಿಪಾಲನ ಮುನಿಲಾಲನ ಸುರಖೇಲನ 2 ವೆಂಕಟರಮಣ ಪಂಕಜಚರಣ ಸಂಕಟಮೊಚನಕಾರಣ ಭವತಾರಣ ಗುಣಪೂರಣ 3 ದಶರಥ ಬಾಲಾ ದಶಮುಖ ಕಾಲ ದಶಶತ ಲೋಚನ ಪಾಲಾ-ಭೂಪಾಲಾ-ಸುರಮುನಿಲೋಲ4 ನಂದ ಕುಮಾರ-ನವನೀತ ಚೋರ ಬೃಂದಾವನ ವಿಹಾರ-ಬಹುದಾರಾ-ಧುರಧೀರ5 ಅಜನುತ ಪಾದ-ಅಪಹೃತ ಖೇದ ಸುಜನಕಲುಷ ನಿರ್ಭೇದ ನುತದೇವ ಸುರಮೋದ 6 ವರವ್ಯಾಘ್ರಾಚಲವಿಹರಣ ಶೀಲ ವರದ ವಿಠಲ ಗೋಪಾಲ-ಶ್ರೀ ಲೋಲ-ಬಹು ಲೀಲಾ 7
--------------
ಸರಗೂರು ವೆಂಕಟವರದಾರ್ಯರು