ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಮೆಂದಿದಕೆ ಹೆಸರಿಟ್ಟೀ ಪಾಪಿ ಪ ಮನಬಂದತೆರ ಸೇಂದಿ ಸೆರೆಕುಡಿದು ಉಬ್ಬಿ ಅ.ಪ ಕೊಡ ಪಡಗ ಹೆಂಡವನು ಕುಡಿದು ಎಚ್ಚರದಪ್ಪಿ ತಡೆಯದಲೆ ಮಲಮೂತ್ರ ಬಿಡುತದರೋಳುರುಳಿ ಬಡಿಸಿಕೊಂಡಟ್ಟೆಯಿಂ ಒಡನೆ ಎಚ್ಚರವೊಂದಿ ಕೆಡಿಸಿದಾನಂದಮ್ಹಿಡಿ ಕೊಡುವೆ ಶಾಪೆನುವಿ 1 ಅವಸರದಿಂ ಜಿಹ್ವೆಯ ಸವಿರುಚಿ ಲವಲವಿಕೆಯಿಂ ಭವಿಜನುಮಿಗಳು ಎಲ್ಲ ಕವಿದುಬಂದಿಳಿದು ಸವಿಯಬಾರದ್ದು ಸವಿದು ಶಿವನೆನಾವೆಂದೆನುವ ಭವಿಗಳೆಲ್ಲರು ಜಗದಿ ಶಿವನ ಪೋಲುವರೆ2 ಕದ್ದು ಮುಚ್ಚಿಲ್ಲದಲೆ ಮುದ್ದೆ ಮುದ್ದೆ ಗಾಂಜವನು ಸಿದ್ಧಪತ್ರೆಂದೆನುತ ಶುದ್ಧಮತಿಗೆಟ್ಟು ಬದ್ಧರೆಲ್ಲ ಸೇದಿ ನಿಜ ಪದ್ಧಿತಿಯನ್ಹದಗೆಡಿಸಿ ಶುದ್ಧಾತ್ಮರೆನಲು ಪರಿಶುದ್ಧರಾಗುವರೆ 3 ನಾನುನೀನೆಂದೆಂಬ ಖೂನಡಗಿ ಎತ್ತ ತಾನೆ ತಾನೆಂದು ಹೊಳೆವ ಬ್ರಹ್ಮ ಆನಂದ ಸೊಬಗು ಏನೊಂದು ತಿಳಿಯದೆ ಆನಂದವೆಂದೆನುತ ಶ್ವಾನನಂದದಿ ಕೂಗ್ವಿ ಜ್ಞಾನಾಂಧ ಅಧಮ 4 ಹುಚ್ಚುಮನುಜನೆ ನಿನಗೆ ಹೆಚ್ಚಿನ ಗೋಜ್ಯಾಕೆ ನಿಶ್ಚಲಭಕುತಿಂ ಬಚ್ಚಿಟ್ಟು ಮನದಿ ಅಚ್ಯುತ ಶ್ರೀರಾಮನ ಹೆಚ್ಚೆಂದು ದೃಢವಹಿಸಿ ಎಚ್ಚರದಿ ಭಜಿಸಿ ಭವಕಿಚ್ಚಿನಿಂದುಳಿಯೊ 5
--------------
ರಾಮದಾಸರು
ಆವ ಸಾಧನದ ಗೋಜ್ಯಾಕೆ ನಿನ್ನ ಭಾವದೊಳಗೆ ಹರಿಯಿರಲಿಕ್ಕೆ ಪ ಜಾವಜಾವಕೆ ಗೋವಳರೊಡೆಯನ ಕೇವಲಭಕ್ತಿಯಿಂ ಕೂಗಲು ಸಾಲದೆ ಅ.ಪ ಎಷ್ಟು ಆಸನ್ಹಾಕಿದರೇನೋ ಬಲು ಕಷ್ಟದಿ ದೇಹದಂಡಿಸಲೇನೋ ಬೆಟ್ಟವೇರಿ ಕೂತರೆ ಏನೋ ಅನ್ನ ಬಿಟ್ಟು ಉಪವಾಸ ಮಲಗಿದರೇನೋ ಕಷ್ಟಹರಣ ಮಹ ಶಿಷ್ಟಪಾಲನೆಂದು ನಿಷ್ಠೆಯಿಂ ಭಜಿಸಲಿ ಸಾಕಾಗದೇನೋ 1 ತೊಪ್ಪಲ ತಿಂದು ಬಾಳಿದರೇನೋ ಮತ್ತು ತಿಪ್ಪೆಯೊಳಗೆ ಉಣಕೂತರೇನೊ ಕಪ್ಪೆಯಂತೆ ಜಲ ಮುಳುಗಿದರೇನೋ ಎಲೊ ಮುಪ್ಪಿನ್ಹದ್ದಿನಂತೆ ಮೇಲಕ್ಹೋದರೇನೋ ಅನುದಿನ ಮುಪ್ಪುರಾಂತಕನ ಗೌಪ್ಯದಿಂ ನೆನೆಯಲು ಸಾಕಾಗದೇನೊ 2 ಸೊಟ್ಟಿ ಹಾಕಿಕೊಂಡು ಪೋದರೇನೋ ಚರ್ಮ ಉಟ್ಟುಕೊಂಡು ತಿರುಗಿದರೇನೋ ಬಟ್ಟಿ ನುಂಗಿ ದೇಹ್ಯ ತೊಳೆದರೇನೋ ಬಲು ಕಷ್ಟದೆಷ್ಟು ಸಾಧಿಸಲೇನೋ ಕೆಟ್ಟಗುಣವ ಬಿಟ್ಟು ದಿಟ್ಟ ಶ್ರೀರಾಮನ ಗಟ್ಟ್ಯಾಗಿ ನಂಬಲು ಮುಕ್ತಿಕಾಣೊ 3
--------------
ರಾಮದಾಸರು
ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ಒಬ್ಬರ ಮಾತ್ಯಾಕೆ ನಾಲಗೆ ನೀನು ಉಬ್ಬದೆ ಸುಮ್ಮನಿರು ನಾಲಗೆ ಪ ಮಬ್ಬಿನಿಂದ ನೀ ಒಬ್ಬರ ಮಾತಾಡಿ ಕೊಬ್ಬನಿಂ ಕೆಡಬೇಡ ನಾಲಗೆ ಅ.ಪ ಮಂದಿ ಮಾತಾಡಲು ನಾಲಗೆ ನಿನಗೆ ಬಂದ ಭಾಗ್ಯವೇನು ನಾಲಗೆ ಒಂದು ಅರಿಯದೆ ಮನಬಂದಂತೆ ಮಾತಾಡಿ ಅಂದಗೆಡಲಿ ಬ್ಯಾಡ ನಾಲಗೆ 1 ನಿಂದೆಯಾಡಬೇಡ ನಾಲಗೆ ನೀನು ಕುಂದುವಡೆಯ ಬೇಡ ನಾಲಗೆ ಒಂದಿನ್ಹೋಗ್ವುದು ನಿನಗೆಂದಿಗೆ ತಪ್ಪದು ಮುಂದಿನ ಸುಖ ನೋಡು ನಾಲಗೆ 2 ಸತ್ಯ ತಪ್ಪಬೇಡ ನಾಲಗೆ ನೀನ ಸತ್ಯ ನುಡಿಯ ಬೇಡ ನಾಲಗೆ ಮೃತ್ಯುಗೀಡಾಗ ಬ್ಯಾಡ ನಾಲಗೆ 3 ಸುಳ್ಳನಾಡಬೇಡ ನಾಲಗೆ ಸದಾ ಒಳ್ಳೆ ಮಾತಾಡು ಕಂಡ್ಯ ನಾಲಗೆ ಸುಳ್ಳು ಈ ಜಗಕೆ ಮಳ್ಳನಾಗಿ ಯಮ ಕೊಳ್ಳಕೆ ಬೀಳ ಬ್ಯಾಡ ನಾಲಗೆ 4 ಹಾಳುಗೋಜ್ಯಾಕೆ ಕಂಡ್ಯ ನಾಲಗೆ ಕಾಲ ಹೇಳಿ ಬರದು ನಿನಗೆ ನಾಲಗೆ ಶೀಲಮನಸಿನಿಂದ ಪಾಲ ಶ್ರೀರಾಮಪಾದ ಕಾಲತ್ರಂiÀiದಿ ನೆನೆ ನಾಲಗೆ 5
--------------
ರಾಮದಾಸರು
ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ ಲೊಳು ಬಿದ್ದಾದ ಸಂಕೋಲಿ ನಾಳೆಗೆ ಬರುತಾದ ಕಾಲನ ದಾಳಿಯು ತಾಳದೆಳಿತಾರ ಜಡಿದ್ವಜ್ರದ ಕೀಲಿ 1 ಹಂದಿಯ ಜನುಮಕೆ ಬೀಳಬೇಡ ಬೇಡಿ ಮಂದರ ನಿಲಯನ ಹೊಂದಿ ಭಜಿಸಿ ಆನಂದಪಡಿ 2 ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ ಪಾರ ಮಾಡಿಕೊಳ್ಳೊ ಭರ್ಜರಿ ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ ವಾರಿಜ ನಂಬಿ ಹೊಡಿ ಜಯಭೇರಿ 3
--------------
ರಾಮದಾಸರು