ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು ಮದಡನಾದನು ಬರಿದೆ ದಳವ ಕೊಂಡು ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು ಮುದದಿ ಭಾಗ್ಯವ ಪಡೆದನದ್ಭುತವ ನೋಡ 1 ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ ಕುರುಡನಣುಗನು ಜರಿದು ಹಾಳಾದನು ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು ನರ ತನ್ನ ಹೆಸರನ್ನು ಸಾರ್ಥಕವಗೈದ 2 ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ ವಾಚಾಮಗೋಚರನು ಶ್ರೀಕಾಂತನು ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ 3
--------------
ಲಕ್ಷ್ಮೀನಾರಯಣರಾಯರು
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಉಯ್ಯಾಲೆ ಉತ್ಸವಗೀತೆ ಜೊ ಜೊ ಜೊ ಜೊ ಶ್ರೀರಂಗನಾಥ ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ. ಮಂಟಪವನು ಶೃಂಗರಿಸಿದರಂದು ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ ಕುಂಠವಾಸನ ಉಯ್ಯಾಲೆಮಂಟಪವನ್ನು ಭಂಟರು ಬಂದು ಶೃಂಗಾರ ಮಾಡಿದರು 1 ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ ತುಲಾ ಮಾಸದ ಆರುದಿವಸದಲ್ಲಿ ವಾರಿಜಮುಖಿಯರ ಒಡಗೊಂಡು ರಂಗ ವೈ ಯ್ಯಾರದಿಂದಲೆ ಬಂದನು ಮಂಟಪಕೆ 2 ಮತ್ತೆ ಮರುದಿನದೊಳಗಚ್ಚುತನಂತ ಕುತ್ತನಿಅಂಗಿ ಕುಲಾವಿ ಧರಿಸಿ ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ ಭಕ್ತವತ್ಸಲನಾಡಿದನುಯ್ಯಾಲೆ 3 ಮೂರುದಿವಸದಲಿ ಮುರವೈರಿ ತಾನು ಭಾರಿ ವಜ್ರದ ಮಕರಕಂಠಿಯಾ ಧರಿಸಿ ನೀರಜನೇತ್ರನು ನಿಗಮಗೋಚರನು ವೈ ಯ್ಯಾರದಿಂದಲಿ ಆಡಿದನುಯ್ಯಾಲೆ 4 ನಾಲ್ಕು ದಿವಸದಲಿ ನಂದನಕಂದ ನವ ರತ್ನದ ಮಕರಕಂಠಿಯಧರಿಸಿ ಧರಿಸಿ ನಾಗಶಯನನಾಡಿದನುಯ್ಯಾಲೆ 5 ಐದು ದಿವಸದಲಿ ಅಕ್ರೂರವರದಗೆ ಕರಿ ದಾದ ಕುಲಾವಿ ಕಲ್ಕಿಯ ತುರಾಯಿ ಗಂಡಭೇರುಂಡಪಕ್ಷಿಯ ಪದಕವನಿಟ್ಟು ಪುಂಡರಿಕಾಕ್ಪನಾಡಿದನುಯ್ಯಾಲೆ 6 ಆರು ದಿವಸದಲಿ ಅಂಗಜನಯ್ಯಗೆ ಕೂರೆ ಕುಲಾವಿ ವೈಯಾರದಿಂಧರಿಸಿ ಹಾರ ಮಾಣಿಕ ರತ್ನ ಸರಗಳಳವಡಿಸಿ ನೀರಜನೇತ್ರನಾಡಿದನುಯ್ಯಾಲೆ 7 ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ ಹಸ್ತದಿ ರತ್ನಹಾರ ಗಂಧವಿರಿಸಿ ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ ಬತ್ತವಳಿಸಿ ಬಂದ ಭಕ್ತವತ್ಸಲನು 8 ಓರೆಗೊಂಡೆಯ ವೈಯಾರದಿಂ ಧರಿಸಿ ನಾರಿಯರೆಡಬಲದಲಿ ಕುಳ್ಳಿರಿಸಿ ವಾರಿಜನೇತ್ರನು ನಡುವೆ ಕುಳ್ಳಿರಲು ವಾರಾಂಗನೆಯರೆಲ್ಲ ಪಾಡುತಿರಲು 9 ಅಷ್ಟಮ ದಿವಸದಿ ಅರ್ತಿಯಿಂದಲೆ ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು ಇಂದಿರೆ ರಮಣನಾಡಿದನುಯ್ಯಾಲೆ 10 ಎಡಬಲದಲಿ ಭಕ್ತರು ನಿಂತಿರಲು ಪಿಡಿದು ಚಾಮರ ವ್ಯಜನವ ಬೀಸುತಿರಲು ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು 11 ದಾಸರಿಸಂದವು ಧಗಧಗನುರಿಯೆ ಸಹ ಸ್ರ ಸೂರ್ಯನಂತೆ ಪದಕಗಳೊಳೆಯೆ ಲೇಸಾದ ರತ್ನದ ಪಾದುಕೆಯನು ಧರಿಸಿ ವಾಸುದೇವನು ಆಡಿದನುಯ್ಯಾಲೆ 12 ಇಂದಿರೆ ರಮಣ ಒಂಭತ್ತು ದಿನದೊಳು ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು ಬಂದು ಮಜ್ಜನವನ್ನು ಮಾಡಿ ವೆಂಕಟರಂಗ ಇಂದಿರೆಸಹಿತಲೆ ನಿಂದ ಹರುಷದಲಿ 13
--------------
ಯದುಗಿರಿಯಮ್ಮ
ತಾತ್ವಿಕವಿವೇಚನೆ ಏರಿಸಿ ಏರಿಸಿ ಮಾರುತ ಮ್ವತಧ್ವಜ ಸಾರ ಸುಖಂಗಳ ನಿತ್ಯದಲುಂಬುವ ಯೋಗ್ಯತೆ ಯುಳ್ಳವರೂ ಪ ಈರನ ಮತವೇ ಸಾರವು ಶ್ರುತಿಗಳ ಶೌರಿಯ ಮತವೇ ಈರನ ಮತ ಖರೆ ದೂಡಿರಿ ಸಂದೇಹ ಅ.ಪ ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ ಅಲ್ಲವು ನುಡಿಯಿದು ಬ್ರಹ್ಮನು ಕಾರಣ ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು 1 ಉಂಬುದು ಉಡುವುದು ಕಾಂತೆಯ ಸಂಗವು ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ ನಂಬಲನರ್ಹವೆ ಕಾರ್ಯಸುಕಾರಿಯ ಖರೆ 2 ಒಂದೇ ತೆರವಿಹ ವಸ್ತು ದ್ವಯವಿರೆ ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ 3 ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ4 ನಾನೇ ಬ್ರಹ್ಮನು ಎಂಬೀ ಜ್ಞಾನವು ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ ತಾನೇ ಬ್ರಹ್ಮನು ಆಗಿರೆ ಭವದೊಳು ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು5 ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ ಬ್ರಹ್ಮನು ನಿರ್ಗುಣ ನಂದವಿಹೀನನು ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ6 ವ್ಯಕ್ತಿತ್ವವು ತಾನಾಶವು ಆಹುದೆ ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು ಮುಕ್ತಿಯು ದುಃಖವಿವರ್ಜಿತ ಬರಿಸುಖ ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ7 ಸತ್ಯವ ನುಡಿವುದು ವೇದವು ಒಂದೆಡೆ ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ ಮೊತ್ತವ ನೂಕುತ ಕಿಚ್ಚಡಿ ವೇದಕೆ ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ8 ಬೌದ್ಧರು ಒಪ್ಪನು ಶ್ರುತಿಗಳ ದೇವನ ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ ವೈದಿಕ ವೇಷದ ಬೌದ್ಧನ ವಾದವೆ ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ9 ತರತಮ ಬಹುವಿಧ ಭೋಗವ ಮುಕ್ತಿಲಿ ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು ಸ್ಥಿರವೇ ಆಯಿತು ಇದರಿಂ ಮುಕ್ತಲಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ10 ನಾಸ್ತಿಕ ವಾದವ ತಳ್ಳಿರಿ ಆಚೆಗೆ ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು11 ಪ್ರಕೃತಿ ವಿಕಾರದ ಜಗವಿದು ವಿದಿತವೆ ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು ವಿಕಲ ವಿವರ್ಜಿತ ಸಕಲ ಗುಣಾರ್ಣವ ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ12 ನಿತ್ಯವು ಈತ್ರಯ ಸಿದ್ಧವು ಆದರೆ ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ ಉತ್ತಮ ನೊಬ್ಬನು ಅಧಮರು ಇಬ್ಬರು ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ13 ಸರ್ವ ಸ್ವತಂತನು ಒಬ್ಬನೆ ಇರದಿರೆ ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ ಸರ್ವಗ ಶಾಶ್ವತ ಪೂರ್ಣಾ ನಂದನು ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ14 ಶುರುಕೊನೆ ಮಧ್ಯವು ಇದ್ದ ದೇವಗೆ ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ ಇರದಿರೆ ಸಕಲೈಶ್ವರ್ಯವು ಆತಗೆ ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ15 ಸುಳ್ಳಿರೆ ಜಗವಿದು ಪಾಲಿಪ ದೊರೆಯದ ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು ಎಲ್ಲಾ ಜಗವಿದು ನಿತ್ಯಾ ನಿತ್ಯವು ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ16 ನಿತ್ಯವು ಪ್ರಕೃತಿಯು ಜೀವರು ಈಶನು ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು ನಿತ್ಯ ಸುಖಂಗಳ ಬಯಸುವ ನಮಗವು ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು17 ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು ಚೇತನ ನಿಚಯದ ಚೇತನ ಹರಿ ಇಹ ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು 18 ದೋಷ ವಿದೂರ ಅಶೇಷ ಗುಣಾರ್ಣವ ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು ನಿಹ ಉಲ್ಲಾಸದಿ ಭಜಿಸುವುದು 19 ಪರಿಮಿತ ಶಕ್ತನು ದೇವನು ಇದ್ದರೆ ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ ಹರಿಗುಣವಗಣಿತ ಸಿಗ ಸಾಕಲ್ಯದಿ ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು 20 ಪ್ರಾಕೃತ ಗುಣಗಣ ವರ್ಜಿತ ದೇವನ ಜ್ಞಾನ ಸುದೃಷ್ಠಿಗೆ ಗೋಚರನು ಸ್ವೀಕೃತ ನಾದರೆ ಜೀವನು ಹರಿಯಿಂ ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು 21 ತರತಮ ಜ್ಞಾನದಿ ಗುಣ ಉತ್ಕರ್ಷವು ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ ಅರಿವುದು ಅತಿಪರಿ ಪಕ್ವದ ಭಕ್ತಿಯ ಮಾಧವ ಮೆಚ್ಚುವನು22 ವೇದಗಳಿಂದಲೆ ದೇವನು ವ್ಯಕ್ತನು ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು23 ಬಿಂಬನು ಹರಿ ಪ್ರತಿ ಬಿಂಬನು ಜೀವನು ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು ಉಂಬುತ ಮುದದಿಂ ಸುಖದುಃಖಂಗಳ ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ24 ಮೆಚ್ಚುಲು ಮಾಧವದಾವುದಸಾಧ್ಯವು ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ25 ಪರ ಮೋಚ್ಚನು ವರಸಮರಿಲ್ಲವು ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ26 ಸಾಮನು ಸರ್ವರ ಬಿಂಬನು ಸರ್ವಸು ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು ಭೂಮನು ಭಕ್ತ ಪ್ರೇಮಿಯು ಸದ್ಗುಣ ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ27 ವಿಧಿ ಪರಿಸರ ವಿಪಶಿವ ಪ್ರಮುಖರು ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು ಉರುಗಾಯನ ಜಗದೊಳ ಹೊರವ್ಯಾಪ್ತನು ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ28 ತರತಮ ಪಂಚಸುಭೇದವು ನಿತ್ಯವು ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು ಅರಿಯರು ಯಾರೂ ಇವನೇ ವಲಿಯದೆ ಪುರುಷೋತ್ತುಮ ಸಾಕಲ್ಯದವಾಚ್ಯನು ಎಂದು ಡಂಗುರ ಹೊಡೆಯುತ 29 ಗುರುವಿನ ದ್ವಾರವೆ ಹರಿತಾ ವಲಿಯುವ ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು ಗುರುಗಳು ಹಿರಿಯರು ಎಲ್ಲಾ ಕ್ರಮದಲಿ ಮಧ್ವರಿಗೊಂದಿಸಿ ಮುದದಿ 30 ಅನುಭವವಿಲ್ಲದ ಜ್ಞಾನವು ವಣವಣ ಸಾಧನೆ ಇದು ಖರೆಯ ಚಿನುಮಯ ನೊಲಿಸಲ್ ಮನೆಧನ ಬೇಡವು ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ 31 ಕಲಿಯುಗವಿದು ವರ ಸುಲಭದಿ ಸಾಧನೆ ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ ವಳದಾರಿಯು ಸರಿ ಕ್ರಮದಿಂ ಪಾಡಲು ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ32 ಕವಿಗುರು ರಾಜರ ಚರಣದಿ ಬಾಗುತ ಪವನ ಮತಾಂಬುಧಿ ಸೋಮನು ಜಯಮುನಿ ಹೃದಯಗ ವಾಯುವಲಿ ಅವಿರತ ನಲಿಯುವ ಶ್ರೀ ಕೃಷ್ಣವಿಠಲನು ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ33
--------------
ಕೃಷ್ಣವಿಠಲದಾಸರು
ಮಗುವು ಕಾಣಯ್ಯ ಮಾಯದ ಮಗುವು ಕಾಣಯ್ಯ ಸುಗುಣಾ ವಾದಿರಾಜರೆ ಮೂಜಗವಾನುದರದೊಳಿಟ್ಟ ಪ ಏಕಾರ್ಣವಾಗಿ ಸಕಲ ಲೋಕವಾಕಾರವಳಿಯಲೂ ಏಕಮೇವಾದ್ವಿತೀಯವೆಂಬಾಗಮಕೆ ಸಮವಾಗೀ ಶ್ರೀಕರಾಂಬುಜದಿಂ ಪಾದಾಂಗುಲಿಯ ಪಿಡಿದು ಬಾಯೊಳಿಟ್ಟು ಶ್ರೀಕಾಂತ ವಟದೆಲೆಯ ಮೇಲ್ಮಲಗಿ ಬ್ರಹ್ಮನ ಪಡೆದಾ 1 ಮಾಯಾಪೂತನೀಯ ಕೊಂದು ಕಾಯವ ಕೆಡಹಿ ಶಕಟನನು ಸಾಯಬಡಿದು ವತ್ಸನ ಧೇನುಕನ ವೃಷಭನ ನೊಯ್ಯನೊದ್ದು ಯಮಳಾರ್ಜುನರಿಗೆ ಸಾಯುಜ್ಯವನಿತ್ತು ತನ್ನ ತಾಯಿಗೆ ತಾ ಮಣ್ಣುಮೆದ್ದು ಬಾಯಿ ಬಿಚ್ಚಿ ತೋರಿಸಿದಾ 2 ಕಡಹದಾ ಮರವನೇರಿ ಸಂಗಡಿಗರೊಂದಿಗೆ ಕಾಳಂದಿಯ ಮಡುವಲಿ ಧುಮುಕಿ ಕಲಕಿ ಜಲವಾ ಆ ಕಾಳಿಂಗನಾ ಪೆಡೆಯ ತುಳಿದು ಜಡಿಯಲವನಾ ಮಡದಿಯರು ಬೇಡಿಕೊಳ್ಳೆ ಕಡಲಿಗಟ್ಟಿ ಬಂದು ಎನ್ನ ತೊಡೆಯ ಮೇಲೆ ಮಂಡಿಸಿದ 3 ಬಳ್ಳಿಗಟ್ಟದುಡಿಯಲ್ಲಿ ಗುಲ್ಲಿಯ ಚೀಲಾವ ಸಿಕ್ಕಿಸಿ ಕಲ್ಲಿಗಟ್ಟ್ಯೊಗರ ಕಂಬಳಿಯ ಕೋಲು ತುದಿಯೊಳು ನಿಲ್ಲಿಸಿ ಹೆಗಲೊಳು ಕೊಂಬು ಕೊಳಲನು ಪಿಡಿದೂದುತ್ತ ಗೊಲ್ಲರೊಡಗೂಡಿ ಆಡುತೆಲ್ಲ ಗೋವುಗಳ ಕಾಯ್ದಾ 4 ಶ್ರುತಿತತಿಗಗೋಚರನು ಚುತಿದೂರನಾದಿಮೂರ್ತಿ ಚತುರ್ಮುಖಾದಿಶೇಷ ದೇವಾರಾಧ್ಯ ದೇವನು ಪತಿ ವೈಕುಂಠಕೇಶವನು ಯತಿಯೆ ನೀ ನೋಡಲು ಶರಣಾಗತನ ತೊಡೆಯೊಳು 5
--------------
ಬೇಲೂರು ವೈಕುಂಠದಾಸರು