ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನೋಡಿ ನಿಜ ಉಪಾಯ ಸದಮಲ ಸುಖದಾಶದಾಶ್ರಯ ಧ್ರುವ ಸಾಧನವಿಲ್ಲಿದೆ ಶ್ರೇಯಸುಖ ಬ್ಯಾರದೆ ಕೇಳತಿಸೂಕ್ಷ್ಮ ಮಾತು ಭೇದಿಸಿ ನೋಡೇನೆಂದರೆ ತಿಳಿದೀತು ಸಾಧಿಸಿ ಕೈಗೊಟ್ಟಿತು 1 ಗೋವಗೋಂತಲ್ಲದೆ ಬ್ಯಾರೆದೆ ಘನ ಭಾವಿಸದೆ ನಿಜಖೂನಾ ಸಾವಧವಾದವಗಿದೇನಿಧಾನ ಭವಹರ ಗುರುಕರುಣಾ 2 ತಾನೆಂಬುದರೊಳು ತಾನೆತಾನಾಗೇದ ಭಾನುಕೋಟಿ ಉದಿತ ದೀನ ಮಹಿಪತಿಸ್ವಾಮಿಯು ಸಾಕ್ಷಾತಾನಂದ ಘನಭರಿತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾಸ್ಕರಗುರುದಯ ಭಾಸುತದೆ ವಿಜಯ ಧ್ರುವ ಕಂಗಳಿಗೆದುರಿಟ್ಟಾನಂದ ಮಂಗಳಕರದೋರುತಲ್ಯದೆ ಚೆಂದ ಸಂಗ ತೋರಿತು ನಿಜವಂದ ಹಿಂಗಿಸಿ ಭವಬಂಧ 1 ಮನಸಿಗೆ ತೋರಿತು ಊರ್ಜಿತ ನೆನೆವಿಗೆ ಕೈಗೊಟ್ಟಿತು ಆಯತ ಜನವನದೊಳುಗುದಿತಾ ಘನವೆ ಸಾಕ್ಷಾತ 2 ಸೋಹ್ಯದೋರಿ ಸಮರಸ ಸಾಹ್ಯಮಾಡಿದ ಸರ್ವೇಶಮಹಿಪತಿಗಿದೆ ಸಂತೋಷ ಇಹಪರ ಉಲ್ಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ ಲೇಸು ಲೇಸಾಯಿತು ಮಾ ಧ್ರುವ ಹಸ್ತವಿಡಲು ಎನ್ನ ಮಸ್ತಕದ ಮೇಲೆ ಸ್ವಸ್ತಹೊಂದಿತು ಮನ ನಿಶ್ಚಯಲಿ ವಿಸ್ತಾರದೋರುವ ವಸ್ತು ಇದೆಯೆಂದು ವಿಸ್ತರಿಸೆನಗಿನ್ನು ದೋರಿತು ಮಾ 1 ಸೋಂಕಲು ಶ್ರೀಗುರುಪಾದ ಎನಗಿನ್ನು ಬೇಕಾದ ಸವಿ ಸುಖಗೊಟ್ಟಿತು ಮಾ ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ ಏಕೋಮಯವಾಗಿದೋರಿತು ಮಾ 2 ನೀಡಲು ನಿಜ ಸುಙÁ್ಞನದ ಭಿಕ್ಷೆಯು ಭವ ದುಷ್ಕಾಳವು ಮಾ ಕೂಡಿತು ಸಮರಸವಾಗಿ ಮಹಿಪತಿ ಜೀವ ಒಡಿಯನ ಚರಣದಂಗುಷ್ಠದಲಿ ಮಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ ಧ್ರುವ ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ ತತ್ವೋಪದೇಶ ತಿಳಿಯಿತು ನಿಧಾನ ಭಕ್ತರಿಗಿದರಿಡುವದು ಅನುದಿನ ಮುಕ್ತಿಯ ಫಲ ಮುನಿಜನರಾಭಣ 1 ಮಳೆಗರಿಯಿತು ಮಹಾಗುರುದಯ ಕರುಣ ಬೆಳೆಬೆಳೆಯಿತು ಮಹಾ ಸುಙÁ್ಞನದ ಸ್ಫುರಣ ತಿಳಿಯಿತು ಬರವಿದು ಭವಬಂಧನ ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ2 ಮನೋಹರವಾಯಿತು ಗುರುಕೃಪೆಯಿಂದ ಜನವನದೊಳು ಕಾಣಿಸಿದ ಗೋವಿಂದ ಅನುಭವ ಸುಖವಿದು ಬ್ರಹ್ಮಾನಂದ ಘನಸುಖಪಡೆದ ಮಹಿಪತಿ ಇದರಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು