ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ
ಕಂಡು ಎಂದಿಗೆ ಧನ್ಯಳಾಗುವೆ ನಾನು ಪಾದ ಪುಂಡರೀಕವನೂ ಪ. ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ ಪಾಂಡವರ ಪ್ರಿಯ ಬಂಧು ನೆಲಸಿದಂಥಾ ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ 1 ಕೋಮಲದ ಚರಣಕಭಿನಮಿಸಿ ಕರಯುಗದಿಂದ ಶ್ಯಾಮವರ್ಣನ ಪಾದಕಮಲ ಮುಟ್ಟೆ ಆ ಮಹಾ ಆನಂದ ಅನುಭವಿಪ ಭಾಗ್ಯವನು ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ 2 ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ ಆಪಾದ ಮೌಳಿ ಈಕ್ಷಿಸುತ ಹೃದಯದಲಿ ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ ಗೋಪಾಲಕೃಷ್ಣವಿಠಲನ ಎಂದು ಕಾಂಬೆ 3
--------------
ಅಂಬಾಬಾಯಿ
ಭಯ ನಿವಾರಣ ಸುಳಾದಿ ನಾಕೇಶ ದೇವತತಿ ಆ ಕಮಲನಾಭ ಯತಿ ನಿಕರಗೊಲಿದನೆ ಶ್ರೀಕರವದನ ಸರ್ವಲೋಕಕಧಿಪ ಕೃಪಾ- ಲೋಕನದಲಿ ನೋಡಿ ಸುಖತೀರ್ಥನುತ ಚರಣ ವ್ಯಾಕುಲ ಬಿಡಿಸಿ ನಿನ್ನಾನೇಕ ಮಹಿಮೆ ತಿಳಿಸಿ ಜೋಕೆಯಿಂ ಕಾಯ್ದ ಗುರು ಆಕಾರಂತರ್ಯಾಮಿ ಈ ಕಾಲದಲಿ ಮನ ವ್ಯಾಕುಲಪಡಿಸುವ ಕಾಕು ಭಯವ ಬಿಡಿಸಿ ನೀ ಕಾಯಬೇಕೊ ದೇವ ಲೋಕ ಲೋಕಾದಿಗಳ ಸಾಕುವ ಭಾರಕರ್ತ ಆ ಕಮಲಭವನಭಯ ವ್ಯಾಕುಲ ಬಿಡಿಸಿದೆ ಲೋಕ ಸೃಷ್ಟಿಪ ಶಕ್ತಿ ಏಕಚಿತ್ತವ ಕೊಟ್ಟು ಲೋಕಲೋಕಾಧಿಪರ ನೀ ಕಾಯ್ದೆ ಕರುಣದಿ ಲೋಕವೆಲ್ಲವ ಕೊನೆಗೆ ಏಕಾಪೋಶನಗೈವ ಲೋಕಪತಿಯೆ ಭಕ್ತಾನೀಕಕÀಭಯದಾತ ಭೀಕರ ಬೆನ್ಹತ್ತಿ ತಾಕಿದ ಮನಸಿನ ವ್ಯಾಕುಲ ಭಯಬಿಡಿಸಿ ಜೋಕೆಯಿಂದಲಿ ಕಾಯೊ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠ್ಠಲ ಈ ಕಾಲಕೊದಗೆ ನಿನ್ನಾನೇಕ ಕೀರ್ತಿಯು ನಿಜವೋ 1 ಭಯ ನಿವಾರಕದೇವ ಭಕ್ತವತ್ಸಲ ನೀನೆ ದಯಮಾಡು ಮನಸಿನಲಿ ತಗುಲಿದ ಭಯವನೆ ಬಿಡಿಸಿ ಭಯಪಡಿಸುತಿರೆ ಖಳನು ಬಾಲಕನ ಪ್ರತಿದಿನದಿ ನಯವಿನಯದಿ ಕಂದ ನಿನ್ನನು ಮೊರೆಯಿಡೆ ಕೇಳಿ ದಯಮಾಡುತ ತರಳನಲಿ ಕನಲುತ ದೈತ್ಯನ ಕೊಂದು ಭಯ ಬಿಡಿಸಿದೆ ಬಾಲಕಗೆ ಭಕ್ತವತ್ಸಲ ನೃಹರೆ ಅಯೋನಿಜೆ ದ್ರೌಪದಿಗೊದಗಿದ ಅನುತಾಪಗಳನೆಲ್ಲ ದಯದಲ್ಲಿ ಪರಿಹರಿಸಿದ ಆಪದ್ಭಾಂಧವ ಸ್ವಾಮಿ ಭಯಪಡಿಸುತ ಭಸ್ಮಾಸುರ ಮೃತ್ಯುವಿನಂದದಿ ಮೃತ್ಯುಂ ಜಯನನು ಬೆನ್ನಟ್ಟಿ ಬರೆ ಹರನು ನಿನ್ನನು ಮೊರೆಹೋಗಲು ಸಂತೈಸಿ ತರುಣಿಯ ರೂಪದಿ ಖಳನ ಕೈಯಿಂದಲೆ ಅವನ ಶಿರ ಉರಿಸುತ ಶಿವನನು ಪೊರೆದೆ ಭಯಹಾರಕ ನರಹರೆ ಶ್ರೀ ಗೋಪಾಲಕೃಷ್ಣವಿಠ್ಠಲ ಜಯವಲ್ಲದೆ ದಾಸರಿಗೆ ಭಯವುಂಟೆ ಪೇಳೋ 2 ನಿತ್ಯ ನಿನ್ನನು ನಂಬಿ ಚಿತ್ತದಿ ನೆನೆವಂಥ ಆಪ್ತವರ್ಗಕೆ ಇನ್ನು ಮೃತ್ಯು ಭಯವು ಉಂಟಿ ಆಪ್ತನಲ್ಲವೆ ನೀನು ಚಿತ್ತಕಂಟಿದ ಭಯ ಮೃತ್ಯು ಪರಿಹರಿಸೈಯ್ಯ ಎತ್ತ ನೋಡಲು ನಿನ್ನ ವ್ಯಾಪ್ತಿ ಸುತ್ತಿರೆ ಜಗದಿ ಮೃತ್ಯುವೆತ್ತಣದೊ ನಿನ್ನುತ್ತಮ ಭಕ್ತರಿಗೆ ಇತ್ತ ದೇಹವು ನಿಂದು ಚಿತ್ತಾದಿಂದ್ರಿಯ ನಿಂದು ನಿತ್ಯ ನಡೆವ ಜೀವಕೃತ್ಯವು ನಿನದೈಯ್ಯ ಸುತ್ತುವೊ ಗ್ರಹಗತಿ ಮೃತ್ಯು ಪರಿವಾರವೆಲ್ಲ ಭೃತ್ಯರಲ್ಲವೆ ನಿನ್ನ ಚಿತ್ತಕ್ಕೆದುರಾಗುವರೆ ಭೃತ್ಯತ್ವದಲ್ಲಿರೆ ಎತ್ತಣ ಭಯವೈಯ್ಯ ಹತ್ತಿಕಾಡುವ ದುಷ್ಟಗ್ರಹಗಳ ಕಡೆಗೆ ನೂಕಿ ಚಿತ್ತ ನಿರ್ಮಲವಿತ್ತು ಮತ್ತೆ ಮಂಗಳವಿತ್ತು ನಿತ್ಯ ಕಾಯಲಿಬೇಕೊ ನಿನ್ನ ಸೇವೆಯನಿತ್ತು ಮೃತ್ಯು ಮೃತ್ಯುವೆ ಮಹಾದೈತ್ಯ ಸಂಹರಣನೆ ಚಿತ್ತದಲ್ಲಿ ನೀನು ಆಪ್ತನಾಗಿರೆ ಬೇರೆ ಹತ್ತಿಕಾಡುವ ಗ್ರಹ ಹತ್ತಿರ ಬರಲುಂಟೆ ಸಿರಿ ಗೋಪಾಲಕೃಷ್ಣವಿಠ್ಠಲ ಹತ್ತಿದ ಮೃತ್ಯು ಭಯ ಕಿತ್ತಿ ಬಿಸುಟು ಕಾಯೊ 3 ವಾಸುದೇವನೆ ನಿನ್ನ ದಾಸನ ಕಾಯುವಂಥ ಈಶನಲ್ಲವೆ ಜೀವರಾಶಿಗಳಿಗೆ ಬಿಂಬ ಸುಷುಪ್ತಿಯಲ್ಲಿ ಕಾವ ಆತ್ಮ ಆನಂದರೂಪ ತಾಸು ತಾಸಿಗೆ ಬಂದ ಭಯವ ಬಿಡಿಸುವದರಿದೆ ದಾಶರಥಿಯೆ ನಿನ್ನ ಅನುಜನ ಜೀವಭಯ ದಾಸ ಹನುಮನಿಂದ ಗಿರಿತರಿಸಿ ಹರಿಸಿದೆ ಆ ಸುಗ್ರೀವನ ಮೊರೆ ಕೇಳಿ ಅಭಯವಿತ್ತು ತೋಷದಿಂದಲಿ ಒಲಿದು ರಾಜ್ಯ ಸುಖವನಿತ್ತೆ ವಾಸವ ಮೊರೆಯಿಡೆ ಒಲಿದು ಅಮೃತವಿತ್ತು ಘಾಸಿಗೊಳಿಪ ಮೃತ್ಯುದೈತ್ಯರ ಸದೆಬಡಿದೆ ನಾಶರಹಿತ ನೃಹರಿ ಗೋಪಾಲಕೃಷ್ಣವಿಠ್ಠಲ ನಾಶದ ಭಯ ಉಂಟೆ ನಿನ್ನ ನಂಬಿದವರಿಗೆ 4 ತರಳತ್ವದಲಿ ಭಯವು ವರ ಯೌವ್ವನದಲಿ ಭಯವು ಜರೆ ಮರಣದಲಿ ಭಯವು ಪರಿಪರಿ ರೋಗದ ಭಯವು ಆರೆಘಳಿಗೆಯು ಬರದಂತೆ ಹರಿ ನೀ ಪರಿಹರಿಸುತಲಿ ಪರತರ ನಿನ್ನಯ ಮಂಗಳ ಚರಿತೆಯ ಸ್ಮರಣೆಯನಿತ್ತು ಹರಿಭಕ್ತರ ಕಾಯುವುದು ಬಿರುದಲ್ಲವೆ ನಿನಗಿನ್ನು ಪರಿಪರಿ ಭಯ ಕ್ಲೇಶಗಳ ಪರಿಹರ ಮಾಡುತ ಕಾಯೊ ವರಯಂತ್ರ ಮಂತ್ರಗಳು ಪರಿಪರಿ ಜಪ ಹೋಮಗಳು ತರತರದೌಷಧ ಪಥ್ಯ ನರಹರಿ ಎಲ್ಲವು ನೀನೆ ಹೊರಗೊಳಗೆಡಬಲದಲ್ಲಿ | ಮರೆವು ಸ್ಮರಣೆಗಳಲ್ಲಿ ಪರಿಪರಿ ಕ್ರೀಡೆಗಳಲ್ಲಿ ಚರಿಸುವ ಕರ್ಮಗಳಲ್ಲಿ ನೆರೆದಿಹ ಜನವೃಂದದಲಿ ಹಗಲಿರುಳು ಸಂಧಿಯಲಿ ಪರಿಪರಿ ಕಾಲಗಳಲ್ಲಿ ಪರಿಪರಿ ದೇಶಗಳಲ್ಲಿ ನರಹರಿ ದುರ್ಗಾಸಹಿತ ವರ ಮೃತ್ಯುಂಜಯ ವರದ ಸಿರಿಭಾರತಿಪತಿಸಹಿತ ಚರಿಸುತ ಬೆಂಬಿಡದಲೆ ನೀ ನಿರುತದಿ ಕಾಯಲಿಬೇಕೊ ಬರಿದನು ಮಾಡದೆ ಸ್ತುತಿಯ ವರ ಸುದರ್ಶನ ಪಾಂಚಜನ್ಯ ಪದ್ಮವ ಪಿಡಿದ ಪರಮ ಮಂಗಳರೂಪ ದೈತ್ಯರಿಗತಿ ಘೋರ ಗುರುಬಿಂಬನೆ ನೀನೆಂದು ಪರಿಪರಿ ಪ್ರಾರ್ಥಿಪೆನಿನ್ನು ಕೊರಗಿಸದಲೆ ಮನವನ್ನು ಹರಿ ಸೌಭಾಗ್ಯವನಿತ್ತು ಕರೆಕರೆಗೊಳಿಸದೆ ಕಾಯೊ ಕರುಣಾಬ್ಧಿಯೆ ದಾಸರನು ವರಭಾಗ್ಯವು ಆಯಸ್ಸು ಆರೋಗ್ಯಂಗಳೂ ಎಲ್ಲ ನಿರುತವಿರಲಿ ಬೇಕೊ ನಿನ್ನವರಿಗೆ ಸಾಧನಕೆ ಕರುಣಾಕರ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಿಸಿದ ಮಾತ್ರದಿ ಸಕಲ ಭಯ ಪರಿಹಾರಕವೋ 5 ಜತೆ ನಿತ್ಯ ಮಂಗಳ ನಿನ್ನ ಸ್ಮರಿಪರ ಮನದ ಭಯವ ಕಿತ್ತು ಬಿಸುಟು ಸಲಹೋ ಗೋಪಾಲವಿಠ್ಠಲ
--------------
ಅಂಬಾಬಾಯಿ