ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧಾರ ಮಾಡಯ್ಯ ಉಡುಪಿ ನಿಲಯ ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ ಪ. ಬಂದೆ ಬಹುದೂರದಲಿ ನಿಂದೆ ತವಚರಣದಡಿ ತಂದೆ ಮುದ್ದುಮೋಹನ ಗುರುಕರುಣದಿಂದ ಕುಂದುಗಳನೆಣಿಸದೆಲೆ ಸಿಂಧುಶಯನನೆ ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1 ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು ಕರ್ಮಸಾಸಿರ ಕಡಿದು ಕರುಣದಿಂದ ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ ಸನ್ಮಾರ್ಗವನೆ ತೋರೊ ಸರ್ವಲೋಕೇಶ 2 ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ ಉಪವಾಸದುಪಟಳವು ಗತಿ ತೋರದೆನಗೆ ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ ಅಪಹಾಸಗೊಳಿಸದಲೆ ಆದರಿಸೊ ಜೀಯ 3 ಬೇಡಲೇನನು ನಿನ್ನ ಕಾಡಲೇತಕೆ ನಾನು ದಾತ ನೀ ಸರ್ವಜ್ಞನಿರಲು ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4 ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5
--------------
ಅಂಬಾಬಾಯಿ
ಸ್ಮರಿಸೋ ಆದರಿಸೋ ಆನಮಿಸೊ, ಮಾನವನೆ ಗುರುಪದವ ಪೊಂದು ಮುದವ ಹೇ ಮನವೇ ನೀ ಸ್ಮರಿಸೋ ಪ ದುರಿತ ತಿಮಿರಕೆ ತರಣಿ ಸಮರೆಂದೆನಿಸಿ ದ್ವಿಜರೊಳು ಮೆರೆದು ವಿಭವದಿ ಕರೆದು ಛಾತ್ರರ ಪೊರೆದ ಐಕೂರು ನರಶಿಂಹಾರ್ಯರ ಅ.ಪ ವರವೆಂಕಟಾರ್ಯರ ತರುಣಿ ಸೀತಾಗರ್ಭ ಶರಧಿಯಿಂದ ಜನಿಸಿದ ಶಶಿಯ ತೆರದಿ ಧರಿಸಿ ವಿಪ್ರತ್ವವನು ಶೀಘ್ರದಿ ಇರಿಸಿ ದ್ವಿತಿಯಾಶ್ರಮದಿ ಪದವನು ಚರಿಸುತಲೆ ಸಾಧನಸುಮಾರ್ಗದಿ ಕರೆಸಿದರು ವರಭಾಗವತರೆಂದು 1 ಹರಿಪದದಲಿ ಮನವಿರಿಸಿ ದುರ್ವಿಷಯಧಿಃ ಕರೆಸಿ ಧಿ:ಕರಿಸಿ ಪ್ರಿತಾಜ್ಞಾನುಸರಿಸಿ ಧರಣಿಯೊಳು ಗುರುಕರುಣದಿಂದಲಿ ಮರುತ ಶಾಸ್ತ್ರವನರಿತು ಕರುಣದಿ ಸರಸದಲಿ ಸಚ್ಛಾಸ್ತ್ರ ಮರ್ಮವ- ನರುಹಿ ಜನರನುಧ್ಧರಿಸಿದವರನು 2 ಕರ್ಮ ಹರಿಯೆ ಮೂಡಿಸುವನೆಂದರಿದು ಅರಿದು ಧ್ಯಾನಿಸುತ ಮೈಮರೆದು ಹರಿಯ ಗುಣಗಳ ಪೊಗಳಿ ಹಿಗ್ಗುತ ಶರಣು ಜನ ಮಂದಾರ ಕಾರ್ಪರ ಶರಣಶಿರಿ ನರಹರಿಯ ಪುರವನು ತ್ವರದಿ ಸೇರಿದವರ ಸುಚರಿತೆಯ 3
--------------
ಕಾರ್ಪರ ನರಹರಿದಾಸರು