ಒಟ್ಟು 472 ಕಡೆಗಳಲ್ಲಿ , 78 ದಾಸರು , 426 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಭಯ ಎನಗಿಲ್ಲ | ದೇವ ನಿನ್ನಯ ಪಾದ ಸೇವೆ ಮಂತ್ರವು ಎನ್ನ | ಭಾವದೊಳಿರಲು ಪ ಸಾವಿಗಂಜುವನಲ್ಲ | ನೋವಿಗಂಜುವನಲ್ಲ ಜೀವಕೋಟಿಯನೆಲ್ಲ | ಕಾವನೀನಿರಲಾಗಿ ಅ.ಪ ವರದಾತ ನೀನಿರಲು | ನರಕ ಭಯ ಎನಗುಂಟೆ ಪರಮ ಪುರುಷಾರ್ಥಗಳ | ಕರವೆತ್ತಿ ಕೊಡುವ ಧರಣೀಶ ಮಾಂಗಿರಿಯ | ಸಿರಿರಂಗಪತಿ ನಿನ್ನ ಸ್ಮರಣೆ ವಂದನೆ ಎನ್ನ ಮನದೊಳಿರಲು1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡಿರೆ ಬಗಳಾಶ್ಚರ್ಯವ ಕಂಡಿರೇ ಬಗಳಾಶ್ಚರ್ಯವದಿಂಡೆಯರಾದವರನ್ನೆಲ್ಲ ತುಂಡು ಮಾಡಿಶುಂಭ ನಿಶುಂಭರಸುವ ಕೊಂಡವಳ ಪ ಕ್ರೂರ ಧೂಮ್ರಾಕ್ಷ ಶುಂಭರಾಜನ ನೇಮದಿಂದಸಾರಿ ದೇವಿಯನ್ನು ಮುಂದಲೆ ಹಿಡಿದು ಎಳೆವೆನೆನಲುವೀರಳೀಗ ಕೇಳಿ ಅವಡುಗಚ್ಚಿ ಕಣ್ಣು ತೆರೆಯೆಹಾರಿದನು ಧೂಮ್ರಾಕ್ಷನುರಿದು ಭಸ್ಮವಾದನು1 ಚಂಡ ಮುಂಡಗಪ್ಪಣೆಯನುದ್ದಂಡ ಶುಂಭನೀಗ ಕೊಡಲುಖಂಡೆಯವನೆ ಹಿರಿದು ಮುಂಕೊಂಡು ದೇವಿ ಬಲಕೆ ನಿಂದುಗುಂಡೆಯರ ಕೂದಲು ಹಿಡಿದು ತುಂಡು ಮಾಡಿಯೆ ತಿಂದುಚಂಡ ಮುಂಡರ ತಲೆಯ ಖಂಡಿಸಿದ ವೀರಳ 2 ರಕ್ತ ಬೀಜನ ರಕ್ತದಿಂದ ರಕ್ತಬೀಜರಾಗೆರಕ್ತನಯನಿ ಹಾಸಿದಳು ನಾಲಿಗೆಯ ಭೂಮಿಗೆರಕ್ತ ಬೀಜರನ್ನು ಕಡಿದು ನುಣ್ಣಗೆ ನುಂಗಿ ಆದಿ-ರಕ್ತ ಬೀಜನನ್ನು ಶೂಲದಿಂದ ತಿವಿದು ತಿಂದಳು 3 ಅಂಬನ ಮೇಲೆ ನಿಶುಂಭನೆರಡು ಹಸ್ತ ಹೋಗಿಎಂಬೆನೇನು ಒದಯಲಾಗ ಅಂಬುಜಾಕ್ಷಿ ತೊಡೆಯ ಕಡಿಯೆತುಂಬಿ ಕೋಪದಿಂದಲವನು ತಿಂಬೆನೆಂದು ಮುಂದೆ ಬರಲುಅಂಬಿನಿಂದ ತಲೆಯ ಕಳೆದಳಂಬರದಲುಘೇ ಎನಲು 4 ತಕ್ಕೆಯಲ್ಲಿ ಬಿದ್ದು ದೆಕ್ಕಬುಕ್ಕಿಯಾಡೆ ಶುಂಭನನ್ನುನಕ್ಕು ಶಿವನ ಶೂಲದಿಂದಲಿಕ್ಕಿದಳು ಖಳನ ಎದೆಯಉಕ್ಕಿ ಹರುಷ ದೇವತೆಗಳು ಓಲಗವನೆ ಮಾಡಿದರುದುಃಖಾತೀತ ಚಿದಾನಂದ ತಾನಾದ ಬಗಳೆಗೇ5
--------------
ಚಿದಾನಂದ ಅವಧೂತರು
ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪುತರಾದ ವರನೆ ಕೃಪವನಧಿ ಹರಿವೊಲಿವಾ ಪ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಕುಕ್ಷಿ ಯದು ಭೂಷಣ1 ಅಸಮಂಜ ಸಂಜನಾಭಾ ವಸುದತ್ತ ಸೌಗಂಧಿಮಣಿ ಮುಕ್ತಕೇಸರೆ ನಿಸಿದಮಣಿ ವಾಹನಾ ಮಹವೀರ್ಯ ಕ್ಷೇಮಕ ಹಸ್ತಿ ವಸು ಅರಿಹಹೇಮಗರ್ಭ 2 ಕುಕುಸ್ಥ ಇಕ್ಷ್ವಾಕು ಮರುತ ಮುನಿಚೈತ್ರರಥ ವಿಕುಕ್ಷಿ ಸುರಥ ಆರಾವಾಚಿ ಶೃತಿ ಕೀರ್ತನ ಹುಶದಿಪ್ತಕೇತ ಸುವುತವಿಭಾವ ಸು ಶಕುತಿ ಶಿಖಿ ಸಾರ್ವಭೌಮಾ ಸುಖಸೇನ ಭಗೀರಥ ಅಜಮಾನು ಸ್ವರ್ಭಾನು ರುಕ್ಮಾಂಗದ ವಿರಾಜ 3 ಪುರಮೀಢ ಸುಮೀಢ ಭದ್ರಾಶ್ವ ರಮಣಕಾ ಹರಿಧರ್ಮನೇತ್ರ ಸುನೇತ್ರಕೇತುಮಾಲ ಪುರೋರವ ಮಿತ್ರಮನ ಜಯಸೇನ ಶುಭವರ್ಮ ಧರಯತೀ ಪುಣ್ಯದ್ರವಿಣೌ ಕರವೀರ ಸಾವೀರ ಪೌಷ್ಯಕೇಸರಿ ಸಿಂಗ ಮರುರುಕ್ಷ ಪ್ರದೀಪ ದಿಲೀಪ ಅಷ್ಟಕಕಂಪ ಅರಣಿ ಭೂಮನ್ಯು ಪ್ರಥಮಾಹವೀರ್ಯ ಸುರದತ್ತ ಹರಿವೀರಮನ್ಯು ವಿಶ್ವಾ 4 ಸುಮತಿ ಸುಂಹರ ರಘು ಮುಚಕುಂದ ದಶರಥ ಸುಮನ ದುಷ್ಯಂತ ಸಂಯಾತಿ ಹಂಸಧ್ವಜ ದಮಯಂತ ನೀಲಾಂಗ ಧರ್ಮಾಂಗದ ಶಮಲ ವಿಮರ ರವಿಕಾಂತ ನಹುಷ ದ್ರುಮಿಳ ಪದ್ಮಾಶತಾಯುಧ ಮಯೂರಧ್ವಜ ಪ್ರಮಿಲ ಕೀರ್ತಿವಾನ ತೊಂಡವಾನ ವಿದಗರ್ಭ ಅಮಿತ ಪರಾಕ್ರಮ ನಭಾಗಂಬರೀಷ ಸೌಮಿತ್ರ ಕಾರ್ತವೀರ್ಯಾ 5 ಪರಮೇಷ್ಟಿ ಮಣಿನಾಭ ಚೋಳ ತ್ರಿಶಂಖ ಶಂಖಣ ಶಂಖ ಮಣಿಕೇತ ಪಾಂಚಜನ್ಯ ಧನಂಜಯ ಕಾಶಿ ಸುಕಾಂತಕುಶ ಕುಶನಾಭ ಮಣಿಸೇನ ಪಾಂಡವ ಜಂಬುನದಿ ದಿವ್ಯರಥ ವನ ಕಕ್ಷಸೇನ ಜಾಕ್ಷಿತ ಪರಿಕ್ಷಿತ ದೃಂಹ್ಯ ಅನು ಅನಾಯುಪದಾತೀ 6 ಹರಿಶ್ರವ ಉತ್ತಾನಪಾದ ಕುಂಡಲಗಜ ಯವನಾಶ್ವರಾಜ ನೀಲಧ್ವಜ ಸುರವೃತ್ತ ಕವೇರ ಆಯು ದೃಢಾಯು ವಿಶಾಲ ಪ್ರತಿ ಶ್ರವ ಚಿತ್ರವೀರ್ಯ ಸುಭಗಾ ಕವಿವಂಗ ಅಂಗ ಕೋಶಲ ಹೇಮಗರ್ಭ ಶುಚಿ ವಿಕುಂಠ ಸುರಭೀ ಸೂ ಹವಿ ಅಭಿರಾಜ ಸುಹಿಜಾ 7 ಶಿಂಧು ಶುಭವರ್ನ ಸಿರ್ಯಾತಿ ಯಯಾತಿ ಸತ್ಯ ಸಂಧ ರೋಹಣ ಸಾಹದೇವ ವಾಪೀ ನಂದನ ಸುಮನ್ಯು ಸ್ವರ್ಭಾನು ಪಿಪ್ಪಲರವಿ ಚಂದ್ರಹಾಸ ಅಶ್ವವಂತ ಶಬಲಾಶ್ವ ಅಣು ಚಂದ್ರವರ್ಣ ಚಪನ ಸತ್ಯ ಸಯಾತಿ ಬಲ ವೃಂದ ವಿಷ್ಣುವರ್ಧನ 8 ಸಂತತದಲಲ್ಲೆಣಿಸಿದರೆ ಪಾರಗಂಡವರಾರು ಚಿಂತನೆಗೆ ತೋರಿದುದು ಸಾರಿದೆನು ಚನ್ನಾಗಿ ಸಂತರು ಕೇಳಿ ಲಾಲಿಸೀ ಪಿಂತೆ ಬಲು ಜನನದಾ ದುರಿತೌಘ ಪೋಗುವದು ಸಂತೋಷವಾಗುವುದು ಪರಿಸಿದ ಜನಕೆ ನಿತ್ಯ ಕಂತುಪಿತ ವಿಜಯವಿಠ್ಠಲನ ಚರಣಾಂಬುಜವ ಸಂತತಿ ಸಹಿತ ಕಾಂಬರೂ 9
--------------
ವಿಜಯದಾಸ
ಹೂವ ಕೊಡೆ ದೇವಿ ಹೂವ ಕೊಡೆಯಾವಾಗಲೂ ನಿಮ್ಮ ಸಿರಿಮುಡಿಯೊಳಗಿರ್ಪ ಪ ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿಪರಿ ಪರಿ ಧೂಪ ಧೂಮಗಳನಿಕ್ಕಿಪರಿಮಳಿಸುವ ಸಂಪಿಗೆಯ ಪೂಸರವ ಸಿಂ-ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ 1 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸರಸಿಜ ಮೊದಲಾದ ಕುಸುಮದಿಂದಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪಅರಳಿದ ಮಲ್ಲಿಗೆ ಹೂವ ಕಂಡೆ ಹೂವ 2 ವ್ಯೋಮಗಂಗೆಯೊಳಿಂದ ಹೇಮಕಾಮರಸವಕಾಮಿನಿಯರು ಕೊಯ್‍ತಂದದನುಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ 3 ಮುತ್ತಿನ ಲಹರಿಯ ರತ್ನದ ರಾಗಟೆಯಸುತ್ತ ಮುತ್ತಲೂ ರಾರಾಜಿಸುವಪುತ್ಥಳಿಯ ಚಿನ್ನದಂತೆ ಘಮಘಮಿಸುವಉತ್ತಮವಾದ ಸುವರ್ಣದ ಕೇದಗೆ ಹೂವ 4 ಜಾತಿ ರತ್ನದ ನಡುವೆ ಜ್ಯೋತಿಯ ತೆರನಂತೆನೂತನವೆನಿಸಿ ಪ್ರಜ್ವಲಿಸುತಿಹಶಾತಕುಂಭದ ಚೌರಿಯ ಮೇಲೆ ಮುಡಿಸಿದಜಾತಿಮಲ್ಲಿಗೆ ಸಂಪಿಗೆ ಸೇವಂತಿಗೆ ಹೂವ 5 ಇಂದೀವರದಳನಯನೆ ಶುಭಪ್ರದೆಇಂದು ನಿಭಾನನೆ ಹೂವ ಕೊಡೆಮಂದಗಮನೆ ನಿಮ್ಮ ತುರುಬಿನೊಳೊಪ್ಪುವಮಂದಾರದ ಮೋಹನ ಮಾಲಿಕೆಯೆಂಬ ಹೂವ 6 ಚಂದ್ರಗಾವಿಯ ಸೀರೆ ಚೆಲುವ ಮುತ್ತಿನಸರದಿಂದಲೆಸೆವ ದೇವಿಹೂವ ಕೊಡೆಮುಂದಲೆ ಮುತ್ತಿನ ಸರದ ಮೇಲೊಪ್ಪುವಬಂಧುರಪೂಗಪುನ್ನಾಗ ಪಾರಿಜಾತದ ಹೂವ 7 ದೇವಿ ನಿಮ್ಮನು ಪೂಜೆಗೈದು ಮೆಚ್ಚಿಸಬಲ್ಲನಾವನೀ ಧರೆಯೊಳುಹೂವ ಕೊಡೆಪಾವನಾತ್ಮಕಿಯ ಪರಾಕ ಮಾಡದೆ ವರ-ವೀವ ಸಮಯವಿದು ಹೂವ ಕೊಡೆ ಹೂವ 8 ಮುತ್ತೈದೆತನವನು ನಿತ್ಯ ಸೌಭಾಗ್ಯವಉತ್ತಮ ಧನಕನಕಾಂಬರವಪುತ್ರ ಸಂತಾನವ ಕೊಡುವೆನೆನುತ ಕರ-ವೆತ್ತಿ ಅಭಯವಿತ್ತು ಹೂವ ಕೊಡೆ ಹೂವ 9 ಎಂದೆಂದೂ ಈ ಮನೆಗೆ ಕುಂದದ ಭಾಗ್ಯವಚಂದವಾಗಿಹ ಛತ್ರಚಾಮರವಚಂದ್ರ ಸೂರ್ಯರ ಪೋಲ್ವ ನಂದನರನುದಯ-ದಿಂದಲಿ ಕೊಟ್ಟು ರಕ್ಷಿಪನೆಂದು ಸೂಡಿದ ಹೂವ10 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮ ಪಟ್ಟದ ರಾಣಿ ಪಾರ್ವತಿ ನಿಮ್ಮಯಸಿರಿಮುಡಿಯೊಳಗಿರ್ಪ ಹೂವ ಕೊಡೆ ಹೂವ 11
--------------
ಕೆಳದಿ ವೆಂಕಣ್ಣ ಕವಿ
ಅಂಕಿತ-ಗಿರಿಧರಸುತ ಗುರುಮಹೀಪತಿರಾಯಾ | ಕೊಡು ಎನಗೆ ಸುಮತಿಯಾ ಪ ಭಕ್ತರ ಸುರಧೇನು | ಐಗಳಿ ವೃತ್ತಿಯನು | ಮನಕೆ ತಾರದೆ ಘನ ವ್ಯಾಪರವನು | ಮಾಡುತ ಭಾಗ್ಯವನು | ಮಾಡಲು ತಿಮ್ಮವ್ವನು 1 ಭಾಸ್ಕರ ಮುನಿ ಬಂದು | ಧಾರುಣಿ ಜನರುದ್ಧರಿಸಲಲ್ಲೆ ನಿಂದು | ಇರಲು ದಯಾಸಿಂಧು | ನಾರಿಶಿರೋಮಣಿ ದರುಶನಕ್ಕೆ ತಂದು | ನೀನೆ ಗತಿಯೆಂದು | ಆರು ತಿಂಗಳಾರಾಧಿಸೆ ಸಲಹೆಂದು | ದೀನಜನ ಬಂಧು | 2 ಸತಿಪತಿಗಳ ಚಿತ್ತಾ | ಆಗುದು ಎನೆ ವನಿತಾ | ನಮಿಸಲು ಗುರುತಾತ | ಆತರಿದನು ತವ ಮುಖವನು ಈಕ್ಷಿಸುತಾ ಪಕ್ವಾಫಲವೆನುತಾ 3 ಮಂದಹಾಸದಿಂ ನುಡಿದನು ನಿಜಗುಟ್ಟು | ವ್ಯಾಪಾರವ ಬಿಟ್ಟು | ಚಂದದಿ ಯಾಚಕ ವೃತ್ತಿಲಿ ಮನನಟ್ಟು | ಎನೆ ಸಮ್ಮತ ಬಟ್ಟು | ಮಂದಿ ಕುದುರಿಗೆಲ್ಲರಿಗಪ್ಪಣೆ ಕೊಟ್ಟು | ನಿಲ್ಲದ್ಹರುಷ ತೊಟ್ಟು | ಉಪದೇಶವ ಕೊಟ್ಟು 4 ಯೋಗಧಾರಣದ ಕೀಲವ ದೋರಿಸಲು | ದೂದಿಯವೋಲ್ | ನಾನಾ ಬಯಕೆಗಳು | ತ್ಯಾಗವ ಮಾಡುವ ಅನ್ನ ಉದಕಗಳು | ಕ್ಲಪ್ತಕೆ ನಿಲ್ಲಿಸಲು | ಮುಗಿದವು ಹಸ್ತಗಳು 5 ಭ್ರೂಮಧ್ಯದ್ವಿದಳದಾ | ದ್ವಾರವ ತ್ಯಜಿಸುತ್ತಾ | ತ್ರಿಕುಟ ಶ್ರೀಹಟ ಗೋಲ್ಹಟ ಗೋಪುರದಾ | ನೋಡುತ ಸಂಭ್ರಮದಾ | ಪಂಕಜದೊಳಗಿದ್ದ 6 ನಿತ್ಯ ಪ್ರಭೆಯು ಅನುದಿನಾ | ಕಾಣುತ ಸಂಪೂರ್ಣಾ | ತಿಳಕೊಂಡ್ಯೋ ಪ್ರವೀಣಾ | ದಿಂದಲೇ ಭಯಹರಣಾ 7 ಅಂತಹದು ಬೇಗ | ನೋಡೆಂದನು ಅನಘಾ | ನಿನ್ನಲ್ಲೇ ಈಗಾ | ದುಷ್ಕøತ ತರುನಾಗಾ 8 ಆಗುದು ನಿರ್ಧಾರಾ | ನಿನ್ನುದರದಿ ಕುವರಾ | ಸಂಶಯ ಬಿಡು ಅದರಾ | ಭಕ್ತರ ಸಹಕಾರಾ 9 ಮುನಿವರನಾಜ್ಞೆದಿ ಸ್ವಸ್ಥಾನಕೆ ಬರುತಾ | ಕೆಲ ದಿವಸಲ್ಲಿರುತಾ | ಸತ್ಪುರುಷರೆನಿಸುತಾ | ಇರಲು ದಯವಂತಾ | ವೇಧಿಯು ಬಂತೆನುತಾ 10 ಅಂತರಂಗದಲಿ ತಿಳಿಯತಲಾಗ್ರಾಮ | ತ್ಯಜಿಸಿದೆ ನಿಸ್ಸೀಮಾ | ಧಾಮಾ ಮಾಡಿದೆ ನಿಷ್ಕಾಮಾ | ಬಟ್ಟರು ಬಹುಪ್ರೇಮಾ | ಗುರುಸಾರ್ವಭೌಮಾ 11 ಅಲ್ಲಿ ಮೂರು ಸಂವತ್ಸರ ಇರಲಾಗಿ | ಶರಣ್ಹಾಳಿಯು ಬಾಗಿ | ಇಲ್ಲಿ ನೀವು ದಯಮಾಡುವದೊಳಿತಾಗಿ | ಸರಿ ಬಾರದಾಗಿ | ಬಂದ್ಯೋ ಮಹಾತ್ಯಾಗಿ | ಬರಲು ವರಯೋಗಿ12 ಕರೆದೊಯ್ದರು ಸ್ತುತಿಸಿ | ಕರಣಿಕ ತನ್ನಯ ಸ್ಥಳದಲಿ ಗೃಹ ರಚಿಸಿ | ಕೊಡಲಂಗೀಕರಿಸಿ | ಹರುಷದಿ ವರಭಾಸ್ಕರ ಮುನಿಕರ ಸರಿಸಿ | ರುಹಜಾತನೆನಿಸಿ | ಇರುತಿರೆ ತೋರಿತು ಸಂತತಿ ಉದ್ಭವಿಸಿ | ಗುರುವಾಕ್ಯಫಲಿಸಿ 13 ಆರಿಂದಾಗದು ನೈರಾಶ್ಯಾಚಾರಾ | ನಡೆಸಿದೆ ಗಂಭೀರಾ | ಧಾರುಣಿ ಜನರಿಂದಧಿಕೃತ ಸಂಸಾರ | ಜಲ ಪದ್ಮಪ್ರಕಾರಾ | ಅನುದಿನ ವೈರಾಗ್ಯದಾಗರಾ | ಸಂಪತ್ತು ಅಪಾರಾ | ತಿಳಿದ್ಯೋ ಸುಕುಮಾರಾ 14 ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು | ಸತಿಸುತ ಪರಿವಾರವು | ಭಕ್ತರ ಸಮುದಾಯವು | ಮೃಷ್ಟಾನ್ನ ಭೋಜನವು 15 ತುಕ್ಕವ್ವಳು ನಿಮ್ಮತ್ತಿಗೆ ಭಾವಿಕಳು | ಪ್ರೀತಿಯ ಶೇವಕಳು | ಫಕ್ಕನೆ ವಿನಯದಿ ಮೃದು ಮಾತಾಡಿದಳು | ಸತ್ಪುರುಷರಿಳೆಯೊಳು | ಅಕ್ಕರದಲಿ ದೋರುವರು ಶಿದ್ಧಿಗಳು ನೀವೇನಿಲ್ಲೆನಲು | ಆದೀತೆಂದೆನಲು16 ಸೊಸಿಯೊಳು | ತುಕ್ಕವ್ವ ತಿಳಿಸಲು | ಕೈಯ್ಯನೆಳೆಯಲು | ನೋಡುತ ಬೆರಗಾದಳು 17 ಲೋಕವನುದ್ಧರಿಸಲು ನೀನವತರಿಸಿ | ಜಡದೇಹವ ಧರಿಸಿ | ಕೊಟ್ಯೋ ಗುಣರಾಶಿ | ಕೊಂಡ್ಯೋ ಸುಖವಾಸಿ | ಬಹು ನರಕದ ವಾಸಿ 18 ಜಗದೊಳಗಿಹ ಶಿದ್ಧರ ಮುಕುಟದ ಮಣಿಯೇ | ಸಾಧಕರೊಳಗೆಣೆಯೆ | ದುರಿತಾಂಧ ದ್ಯುಮಣಿಯೆ | ಕುಹಕರಿಗೇನ್ಹೊಣೆಯೆ | ವರಸತ್ವದ ಗುಣಿಯೆ 19 ಕಾಲ ತಪ್ಪಿಸುವದೇನೈ ನಿಮಗರಿದೆ | ಮನದೊಳು ನೀನರಿದೆ | ತಾಳಿದ ದೇಹವ ಸಾಕೆನುತಲಿ ಜರಿದೆ | ಚಿದ್ರೂಪವ ಬೆರೆದೆ | ಬಹು ಭಕ್ತರ ಪೊರೆದೆ | ತಡಮಾಡಗೊಡದೆ20
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಆ) ಲಕ್ಷ್ಮೀ ಸ್ತುತಿಗಳು ಅಮ್ಮಾ ನೀನೆಮ್ಮ ಮನೆಯಲಿಹುದಮ್ಮಾ ನಿತ್ಯ ಪ ನಮ್ಮಯ್ಯನೊಡನೆ ಸುಭಾಷಿಸುತಲಿ ಸಮ್ಮಾನದಿ ಮುಖದಿಂ ನಲಿದಾಡುತಾ ಅ.ಪ ಮಕ್ಕಳೆಂದೆಮ್ಮ ನಲಿಸುತ ಒಲಿಸುತ ಸಕ್ಕರೆ ಸಮಿಗುಂಮಿಗಲಹ ಮಾತುಗ ಳಕ್ಕರದಾಡುತ ಶುಭಸಂಪದಗಳ ನಕ್ರೂರಾರ್ಚಿತೆ ಕೊಡುತ ಮೋದದಿಂ 1 ನೀನಿರುವ ಮನೆಯು ಶೋಭಿಸುತಿಹುದು ತಾನೇತಾ ಮಂಗಳ ನೆಲೆಸಿಹುದು ಸಾನುರಾಗದಿಂ ಸರ್ವರ ಜನನಿಯೆ ನಾನಿನ್ನಾದರದ ಪ್ರೇಮಸುಪುತ್ರನು 2 ನಿತ್ಯಾರಾಧನೆಗನುಕೂಲಗಳಂ ಸತ್ಯಧರ್ಮಗಳ ಬಿಡದಾಚರಿಪುದ ಸ್ತುತ್ಪತದಿ ಸಮಾರಾಧನ ವೆಸಗುನವ ಅತ್ಯಾನಂದದ ಸೌಭಾಗ್ಯವಿತ್ತು 3 ಸವಿ ಸವಿಭಕ್ಷ್ಯಗಳನುಗೊಳಿಸುತ್ತ ಸುವಿಮಲ ಮಂಗಲ ದ್ರವ್ಯಸುಪುಷ್ಪವ ಸುವಾಸಿನಿಯರಿಗೂ ಸದಭಕ್ತರಿಗುಂ ಸುವರ್ಣಭಾಜನದೀಯುವುದಿತ್ತು 4 ಹಾಲು ಹಣ್ಣು ಮಧು ಮಧುರದ ಮನೆಯಂ ಶ್ರೀಯೋಗಗಾನ ಧ್ಯಾನದ ನೆಲೆಯ ಬಾಲರ ಲೀಲೆಯ ಲಾಲನ ಪಾಲನ ಕಾಲವೆಲ್ಲ ಸೊಗನಗೆ ಮೊಗನೆರೆಯಲಿ 5 ಭೃಗುಸುತೆ ಕ್ಷೀರಸಾಗರಜಾತೆ ಭಗವತಿ ಭಾಗ್ಯದಾತೆ ಅಮೃತ ಮಂಗಳಸುಂದರಿ ಚಂದ್ರಸಹೋದರಿ ಅಗಲದೆ ಹರಿವಕ್ಷಸ್ಥಲಸ್ಥಿತೇ 6 ಸುವರ್ಣವರ್ಣಿ ಕಮಲಸುಚರಣೆ ಭುವಿಸುರ ಪೂಜಿತೆ ಕಲ್ಪಲತೆ ಭವ ಭವಹಾರಿಣೆ ಭಕ್ತೊದ್ಧಾರಿಣೆ ದಿವಿರಾಜವರದೆ 7 ಶ್ರೀಕರ ಸಾತ್ವಿಕ ಸುಲಲಿತರಿಂದ ನಾಕಿಗರೆಂಬೊ ಬಂಧುಗಳೊಡನೆ ಜೋಕೆಯ ಮಕ್ಕಳ ವಿವಾಹಗೈದು ಸಾಕಾರ ಸಂಸಾರ ಸುಖನಿಧಿ ಎನಿಸು 8 ಚಪ್ಪರ ತೋರಣ ಮೇಲ್ಕಟ್ಟುಗಳಿಂ ದೊಪ್ಪುವ ಬಗೆಬಗೆ ರಂಗವಲಿಗಳಿಂ ದಿಪ್ಪಾಸಾಗರ ಮಂಗಳ ವಾದ್ಯಂಗ ಳಪ್ಪ ಸದೃಹವ ಮಾಡುತ ಮಮತೆಯಿಂ9 ಅಪ್ರತಿಮ ರತ್ನಪೀಠವನಿಟ್ಟು ತುಪ್ಪದ ನಂದಾದೀವಿಗೆ ಹಚ್ಚಿ ಅಪ್ರಮೇಯನೋಡನಿಪ್ಪ ನಿನ್ನ ಸುಪ್ರೀತಿಯೊಳಾಂ ಪೂಜಿಪುದೀಯತ 10 ಪರಿಮಳ ತೈಲದಭ್ಯಂಜನದಿಂ ಸುರಭೀತೊಯ ಸ್ನಾವನಗೈದು ಹರಿದ್ರಾಕುಂಕುಮ ರತ್ನ ಕಿರೀಟವು ಸರಪೀತಾಂಬರ ಕಮಲವ ಧರಿಸಿ 11 ನರುಗುಂಪಿನ ಶ್ರೀಗಂಧದ ಲೇಪ ಪರಿಪರಿ ಘಮ ಘಮ ಸುಗಂಧ ಧೂಪ ಪರಮ ಪ್ರಕಾಶದ ಮಂಗಳ ದೀಪ ಸಿರಿಹರಿ ನಿಮ್ಮಯ ದಿವ್ಯ ಸ್ವರೂಪ 12 ಬಗೆ ಬಗೆ ಭಕ್ಷ್ಯವು ಕ್ಷೀರಾಜ್ಯಗಳಂ ಹಗಲಿರುಳುಂ ಫಲತಾಂಬೂಲಗಳಂ ನಿಗಮ ಸ್ತುತಿಕೈಗೊಳ್ಳುತ ಪಿಯೆ ನೀ ನಗಲದೆ ಸವಿಯುತ ಸಂತೋಷದಿಂದ 13 ಜಯ ಜಯ ಕರ್ಪೂರಾರತಿಮಾತೆ ನಯದಿಂ ಕುಸುಮಾಂಜಲಿಯಖ್ಯಾತೆ ದಯೆಯಿಂ ಭಾವಭಯ ಹರಿಸಾಪೂತೆ ಜಯ ಜಯ ಶ್ರೀಕೇಶವ ಸಂಪ್ರೀತೆ 14 ವಿಧಿರಮಾತೇ ಶ್ರೋಣಿತ ಚರಿತೆ ಬುಧಜನಪಾಲೆ ಕೃಪಾಲಪಾಲೆ ಮುದದಿಂ ಪಾಲಿಸು ಬಾಳಿನಲಿಡುತೆ ಹೃದಯನ್ನುತೆ ಜಾಜೀಶ ಸಹಿತೆ 15 ಅಗಣಿತ ಸುಗುಣೆ ಕರುಣಾಭರಣೆ ಜಗದೋದ್ಧಾರೆ ಜಯಜಯತಾರೆ ಯುಗಪದಕೀಗಲೆ ಮುಡಿಯಿಟ್ಟಿರುವೆ ಮಗುವಾದೆನ್ನಂ ಮಡಿಲೊಳಗಿಡು ನೀಂ 16
--------------
ಶಾಮಶರ್ಮರು
(ಊ) ಗುರುನಮನ ಮುಳುಗಿ ಮೀಯೊ ಮನುಜ ಪ ದುರಿತ ಹರಿಸಿ ಸುಸ್ಥಿರ ಪದ (ಕರುಣಿಸುವಂಥ) ಅ.ಪ ಸ್ವಾರ್ಥವಾಗದಣ್ಣ || ಮುಕ್ತಿಸಂಪದಗಳ ಅರ್ತಿಯೊಳ್ ಪಡೆಯಲು 1 ಮೂರ್ಜಗಪತಿ ದಯವಿಡನಣ್ಣ || ಅರ್ಜುನ ಸಖನ ಪದಾಬ್ಜವ ಸೇರಲು 2 ಅಕ್ಷಯ ಸುಖವ ತನ್ನಿಚ್ಛೆಯೊಳ್ ಪಡೆದು ಮು-| ಮುಕ್ಷುವಾಗಿ ನಿಜ ಮೋಕ್ಷವ ಪಡೆಯಲು 3 ಸನ್ನಿಧಿ ಭಾಗ್ಯವನುಣ್ಣುತಿರುವರೆ 4 ಆದಿಮಧ್ಯಾಂತವಿಲ್ಲದ ಪದವಿಯೊಳ್ ಸ-| ದಾನಂದನಾಗಿ ವಿನೋದದೊಳಿರುವರೆ 5
--------------
ಸದಾನಂದರು
(ಕುಂಜಾರು ದುರ್ಗಾ) ರಮೇ ರಜನೀಕರಾಭಮುಖಿ ಕ್ಷಮಿಸೆನ್ನವಗುಣವಾ ತಮೋ ನಿವಾರಿಣಿ ಪ. ಚರಣಯುಗೇ ಕರತಂದಿರಿಸಿದ 1 ಶಿರೋಹರೆ ಮನವಿರಿಸು ಕಟಾಕ್ಷದಿ 2 ಸರೋಜಭವಪುರ ಹರ ಶಕ್ರಾದಿಕ ಸುರೇಡ್ಯ ವೆಂಕಟಗಿರಿ ವರನಾ ಪುಷ್ಕಳ ವರಪ್ರದಾಯಿನಿ ಚರಂತನಾನುಗಪರಾತ್ಮದರ್ಶಿನಿ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ) ಶ್ರೀನಿವಾಸಾಯ ನಮೋ ಪ. ಶ್ರೀನಿವಾಸಾಯ ಶತಭಾನುಪ್ರಕಾಶಾಯ ಶ್ರೀನಿವಾಸಾಯ ನಿಜ ಭಕ್ತಜನಪೋಷಾಯ ಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ. ದೋಷಗಂಧವಿದೂರ ಕೇಶಿಮುಖದಾನವ ವಿ- ನಾಶವಿಧಿಭವಸುಖನಿವಾಸ ವಾಸುಕಿಶಯನ ವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷ ದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ- ಭೂಷ ಭೂತಾತ್ಮ ಭವಪಾಶಹರ ಪರತರ ದ- ಕೇಶವಾಯ ನಮೋನಮಃ 1 ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶ ಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತ ಸನ್ನುತ ಪಾದನೀರರುಹದ್ವಂದ್ವನೆ ಸುರರು ತಿಳಿಯರು ನಿನ್ನ ಭೂರಿಮಹಿಮೆಗಳ ಸಾಕಾರವನು ಬಣ್ಣಿಸುವ ನಾರಾಯಣಾಯ ನಮೋ 2 ವೇದವೇದ್ಯನೆ ದುರಿತಶೋಧನೆ ದೈತ್ಯಗಣ- ಛೇದಕನೆ ಸುರಸುಪ್ರಸಾದಕನೆ ಭಕ್ತಜನ- ಸಮಾನಾಧಿಕ್ಯರಹಿತ ಸತತ ಆದಿತ್ಯ ಶತಕೋಟಿತೇಜೋವಿರಾಜ ಮಹ- ದಾದಿಕಾರಣ ಮಧುವಿರೋಧಿ ಮಂಗಲಸುಖಾಂ- ಮಾಧವಾಯ ನಮೋನಮಃ 3 ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು- ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ- ಸನ್ನುತ ಮಹೇಂದ್ರ ವಂದಾರುಜನತ್ರಿದಶಮಂದಾರ ಕೋಮಲಿತ ವೃಂದಾವನವಿಹಾರ ಕಂದರ್ಪಜನಕ ಬಾ- ತುಭ್ಯಂ ನಮಃ 4 ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷ ಮುಷ್ಟಿಕಾಸುರವೈರಿ ಮುನಿಜನಮನೋಹಾರಿ ಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇ ಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆ ತುಷ್ಟಿಯನು ನೀನಿತ್ತು ಸಲಹೊ ಸಾಮಜವರದ ತುಭ್ಯಂ ನಮೋ 5 ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತ ಬುಧಜನಪ್ರಿಯ ಭೂತಭಾವನ ಜಗನ್ನಾಥ ಮದನಕೋಟಿಸ್ವರೂಪ ವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ- ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸ ಮಧುಸೂದನಾಯ ನಮೋ 6 ಅಕ್ರೂರವರದ ಸದತಿಕ್ರಮರ ಗೆಲಿದ ಹಯ- ವಕ್ತ್ರ ವೈಕುಂಠಾಖ್ಯ ಪುರವಾಸ ಜಗದೀಶ ಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನು ಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ- ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿ ತ್ರಿವಿಕ್ರಮಾಯ ನಮೋನಮಃ 7 ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು- ದಾಮಸಖ ಪರಿಪೂರ್ಣಕಾಮ ಕೈರವದಳ- ಸುಜನಸ್ತೋಮಸುರಕಾಮಧೇನು ಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ- ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ- ಪ್ರಾಜ್ಞ ವಾಮನಾಯ ನಮೋನಮಃ 8 ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ- ರಾಧಭಂಜನ ಭವಾಂಬೋಧಿಕುಂಭಜ ಭಜಕ- ಚತುಷ್ಟಾದ ಪಾವನಚರಿತನೆ ಗಾಧಿಜಾಧ್ವರಪಾಲ ಗರುಡಧ್ವಜ ದಯಾಳು ನಾದಬಿಂದು ಕಲಾತೀತ ರುಕ್ಮಿಣಿನಾಥ ಶ್ರೀಧರಾಯ ನಮೋನಮಃ 9 ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ- ಕಾಶ ಪಾಲಿತನಿಖಿಳಭೂಸುರವ್ರಜ ಮಂದ- ದೂಷಣಾದ್ಯ ಸುರಹರನೆ ಈಶಪತಿಸೇವ್ಯಾಂಬರೀಶನೃಪವರದ ಪರ- ಮೇಶ ಕೋವಳಪೀತವಾಸ ಕರ್ದಮಶುಕಪ- ಹೃಷೀಕೇಶಾಯ ತುಭ್ಯಂ ನಮೋ 10 ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲ ಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ- ಬುದ್ಧ ಬುಧಜನಸುಲಭ ಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇ ತದ್ವೀಪವೈಕುಂಠಮಂದಿರತ್ರಯ ಸಾಧು- ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11 ಸಾಮಗಾನವಿನೋದ ಸಾಧುಜನಸುಖಬೋಧ ಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತ ಸಮರಂಗ ಭೀಮ ನಾಮಧಾರಕರ ಪರಿಣಾಮರೂಪಕ ಸುಜನ- ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣ ದಾಮೋದರಾಯ ನಮೋ 12 ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯ ವೆಂಕಟಾಚಲಸದಾಲಂಕಾರ ಶೇಷಪರಿ- ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗ ಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತ ಓಂಕಾರನಿಧನ ಸಾಮಕಭಕ್ತರಾನೇಕ ಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ 13 ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದು ಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯ ನೀ ಸಲಹೊ ದೇವದೇವ ಭೂ ಸಲಿಲ ಪಾವಕಾಕಾಶಾದಿ ಭೂತಾಧಿ- ವಾಸ ರಾಕ್ಷಸವನಹುತಾಶ ನಾನಾ ರೂಪ- ವಾಸುದೇವಾಯ ನಮೋ 14 ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲ ವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರ ಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನ ರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ- ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ- ಪ್ರದ್ಯುಮ್ನಾಯ ತುಭ್ಯಂ ನಮಃ 15 ಉದ್ಧವಾದಿ ಸಮಸ್ತ ಭಾಗವತಜನಕಮಲ- ಮಧ್ಯಚರರಾಜಹಂಸಾಯ ಮಾನಸದ ಶ್ರೀಹರಿಯೆ ವೈದ್ಯನಾಥವಿಧಾತನೆ ಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ- ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆ ಅನಿರುದ್ಧಾಯ ತುಭ್ಯಂ ನಮಃ 16 ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾ ಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷ ಮಂಗಲರಿತ ಗುರುತಮ ಗುಣಧ್ಯಕ್ಷನೆ ಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದ ಶರಭಂಗ ಮುನಿಪಾಲ ಶಮಿತದಾನವಜಾಲ ಪುರುಷೋತ್ತಮಾಯನ್ನಮೋ 17 ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್- ವಿಶ್ವತೋಮುಖ ವಿಶ್ವತೋಬಾಹು ಕರುಣಾಕ- ದಯಮಾಡು ಶ್ರೀವಕ್ಷಸ್ಥಲನಿವಾಸನೆ ಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ- ಮೋಕ್ಷದಾಯಕ ಯಜ್ಞಮೂರ್ತಿ ರೂಪತ್ರಯ ಮ- ಅಧೋಕ್ಷಜಾಯ ನಮೋನಮಃ 18 ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು- ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ- ಶಿರಪ್ರಕರಧೀರ ಪ್ರಹ್ಲಾದಾಭಿವರದ ಭೂರೀಕರರೂಪ ಭೂಮಕೀರ್ತಿಕಲಾಪ ಸಾರವಜ್ರಸ್ತಂಭದಿಂ ಬಂದ ನಂದ ಸುಕು- ನಾರಸಿಂಹಾಯ ನಮೋ 19 ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತ ಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ- ನಿರ್ಮಿಸುವ ಆಶ್ಚರ್ಯಕೃತ ಸಲೀಲ ಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯ ಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ- ಶ್ರೀಮದಚ್ಯುತಾಯ ನಮೋನಮಃ 20 ಚೈದ್ಯಮಥನ ಮನೋಜ್ಞಶುದ್ಧಾತ್ಮ ಸರ್ವಜ್ಞ ಹೊದ್ದಿಸಿದ ಪಾರ್ಥನಿಂಗೆ ಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ- ವಿದ್ದ ಮಾನಸವ ಪಾದದ್ವಯದೊಳಿರಿಸೈ ದ- ಜನಾರ್ದನಾಯ ನಮೋನಮಃ 21 ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದ ನಂದಗೋಪನ ಕಂದನೆನಿಸಿ ಬಾಲಕತನದ ಸುಂದರೀರಮಣ ಜಯತು ತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ- ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ- ಉಪೇಂದ್ರಾಯ ತುಭ್ಯಂ ನಮಃ 22 ಸ್ಥಿರಚರಾತ್ಮಕ ಧೇನುಚರ ದೇವಕೀಜಠರ- ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥ ದುರಿತದೂರ ಗಭೀರನೆ ನಿರತಿಶಯ ನಿಜನಿರ್ವಿಕಲ್ಪ ಕಲ್ಪಾಂತಸಾ- ಗರದಿ ವಟಪತ್ರಪುಟಶಯನ ಪುಣ್ಯಶ್ರವಣ ಹರಯೇ ನಮೋನಮಸ್ತೇ 23 ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ- ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ- ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾ ದುಷ್ಟ ನರಕಾದಿದಾನವರ ಮರ್ದಿಸಿದ ಜಗ- ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ- ಹರೇ ಕೃಷ್ಣಾಯ ತುಭ್ಯಂ ನಮಃ 24 ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆ ಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ- ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜ ಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು- ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ- ಲಕ್ಷ್ಮೀನಾರಾಯಣಾಯ ನಮೋ 25
--------------
ತುಪಾಕಿ ವೆಂಕಟರಮಣಾಚಾರ್ಯ
(ಕೊಕ್ರಾಡಿ ಸುಬ್ರಹ್ಮಣ್ಯ) ಕಾಯೊ ಸುಬ್ರಹ್ಮಣ್ಯ ಸಜ್ಜನ- ಪ್ರೀಯ ಸುರವೇಣ್ಯ ಪ. ತೋಯಜಾಕ್ಷ ನಿಖಿಲಾಮರಸೇವಿತ ಶ್ರೇಯಸ್ಕರಫಲದಾಯಕ ಶಂಕರ ಅ.ಪ. ನಿತ್ಯಾನಂದಕರ ನಿಜಾಶ್ರಿತ- ವತ್ಸಲ ರಣಶೂರ ಕೃತ್ತಿವಾಸಸುತ ದೈತ್ಯಾಂತಕ ರಿಪು- ಮತ್ತಗಜೇಂದ್ರಮೃಗೋತ್ತಮ ಸಂತತ 1 ನಿಗಮಾಗಮವಿನುತ ನೀರಜ- ದೃಗಯುಗ ಸಚ್ಚರಿತ ಅಗಜಾಲಿಂಗನ ಅಘಕುಲನಾಶನ ಸುಗುಣಾಂಬುಧಿ ತ್ರೈಜಗದೋದ್ಧಾರಕ 2 ಅಂಬುಧಿಗಂಭೀರ ಧೀರ ತ್ರೀ- ಯಂಬಕ ಸುಕುಮಾರ ತುಂಬುರು ನಾರದಯೋಗಿಸಭಾಂಗಣ- ಸಂಭಾವಿತ ಚರಣಾಂಬುಜಯುಗಳ 3 ಅಂಗಜ ಶತರೂಪ ಸಮರೋ- ತ್ತುಂಗಸುಪ್ರತಾಪ ಗಂಗಾಸುತ ವೇದಾಂಗಪಾರಜ್ಞ ಮಂಗಲಚರಿತ ವಿಹಂಗಾರೂಢಾ 4 ಶಕ್ರಾರಾತಿಹರ ತ್ರಿಜಗ- ಚ್ಚಕ್ರಾನಂದಕರ ಚಕ್ರಾಂಕಿತ ಶ್ರೀಲಕ್ಷ್ಮೀನಾರಾಯಣ- ವಿಕ್ರಮಸಿಂಹ ಕೊಕ್ರಾಡಿ ಪುರೇಶ್ವರ5 ಪಾವಂಜೆಯ ಸುಬ್ರಹ್ಮಣ್ಯ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
(ಮೂಲ್ಕಿಯ ನರಸಿಂಹ ದೇವರು) ರಕ್ಷಿಸು ಮನದಾಪೇಕ್ಷೆಯ ಸಲಿಸುತ ಲಕ್ಷ್ಮೀನರಹರಿ ರಾಕ್ಷಸವೈರಿ ಪ. ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ. ಉಭಯ ಶುಚಿತ್ವವು ಊರ್ಜಿತವೆನೆ ಜಗ- ದ್ವಿಭು ವಿಶ್ವಂಭರ ವಿಬುಧಾರಾದ್ಯ ಶುಭಮತಿ ಸಂಸ್ಥಿತಿಯಭಯವ ಪಾಲಿಸೊ ತ್ರಿಭುವನಮೋಹನ ಪ್ರಭು ನೀನನುದಿನ1 ಸಿಂಧುಶಯನ ನಿತ್ಯಾನಂದ ಗುಣಾಬ್ಧೇ ಹಿಂದಣ ಪಾಪವು ಮುಂದೆಸಗದ ರೀತಿ ಮಂದರಾದ್ರಿಧರ ಮಾಮವ ದಯಾಕರ 2 ಪಾಪಾತ್ಮರಲಿ ಭೂಪಾಲಕನು ನಾ ಶ್ರೀಪತಿ ಕರುಣದಿ ಕಾಪಾಡುವುದು ಗೋಪೀರಂಜನ ಗೋದ್ವಿಜರಕ್ಷಣ ಕಾಪುರುಷರ ಭಯ ನೀ ಪರಿಹರಿಸಯ್ಯ 3 ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು ಸರ್ವಾಂತರ್ಯದೊಳಿರುವನೆ ಸಲಹೊ ದುರ್ವಾರಾಮಿತ ದುರ್ವಿಷಯದಿ ಬೇ- ಸರ್ವೇನು ಪನ್ನಗಪರ್ವತವಾಸನೇ 4 ಶರಣಾಗತನಾಗಿ ಸೆರಗೊಡ್ಡಿ ಬೇಡುವೆ ವರ ಮೂಲಿಕಪುರ ದೊರೆಯೇ ಹರಿ ಲಕ್ಷ್ಮೀನಾರಾಯಣ ತ್ರಿಜಗ ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀಹರಿಯ ಮೋಹಿನಿ ರೂಪ) ನೋಡಿರೊ ಸ್ತ್ರೀರೂಪವ ನೋಡಿರೋ ಪ. ನೋಡಿರೊ ಹರಿಯ ಸ್ತ್ರೀರೂಪ ಸ್ತುತಿ ಮಾಡಿರೊ ಮಹಿತಾ ಪ್ರತಾಪ ಅಹ ಜೋಡಾದ ಸತಿಯರ ನೋಡಿ ನಗುತ ನಲಿ- ದಾಡುವ ಶ್ರೀಕೃಷ್ಣ ಪ್ರಹುಡೆಯಾಗಿರುವುದ ಅ.ಪ. ಭಾರ್ಗವ ವಾಸರದಲ್ಲಿ ಯತಿ ವರ್ಗವೆಲ್ಲವು ಸೇರುತಿಲ್ಲಿ ಪಂಚ ಮಾರ್ಗಣಪಿತನಿದಿರಲ್ಲಿ ಅಷ್ಟವರ್ಗೋಪಚಾರಗಳಲ್ಲಿ ವಿಧಿ ಭರ್ಗ ವಂದ್ಯ ಪ್ರಭು ದುರ್ಗಾರಮಣ ಸತ್ವ ಸರ್ಗಪಾಲನ ಸನ್ಮಾರ್ಗದಿ ಸ್ತುತಿಪುದ 1 ಧೀರಮರಾಸುರರಂದು ಕ್ಷೀರವಾರಿಧಿ ತಡಿಯಲ್ಲಿ ಬಂದು ಬಹು ಮಂದರ ಕಟ್ಟಿ ನಿಂದು ಸುಧ ಸಾರವ ತೆಗೆಯಲು ಕಾರುಣ್ಯದಲಿ ದಾನ ವಾರಿಗಳಿಗೆ ಕೊಟ್ಟ ನಾರಾಯಣಿಯನ್ನು 2 ನಾಯಕ ಧೀರ ಕಂಜ ನಿವಹ ರಕ್ಷಿಸು ಗಂಭೀರಾ ಅಹ ಪವನಾವತಾರನ ಸ್ತವನಕೊಲಿದು ಬಂದ ಕವಿ ಶೇಷಗಿರಿವಾಸ ಭವಭಯಹಾರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
* ನೆರದು ಗೋಪಿಯರೆಲ್ಲಾರು ಕೃಷ್ಣಯ್ಯನ ಶೆರಗಪಿಡಿದುಕೊಂಡು ಅರುಹಿದರತಿ ಬೇಗದಿ ಪ. ಹಾಲು ಕರವುತಿರಲು ತೊಲೆಗೆ ನಿಚ್ಚಣಿಕೆಯ ಹಾಕದೆ ಸುರಿದಾನು ನೆಲವಿನ ಪಾಲ್ಮೊಸರಾ 1 ಅಂಮೈಯ್ಯಾ ಇಲ್ಲಾ ಕಾಣೆ ಇವಳು ಯಂನ್ನಾ ಸುಂಮ್ಮಾನೆ ದೂರುವಳು ಹುಂಮ್ಮಿಂದ ನಾನವಳ ಅಟ್ಟಕ್ಕೆ ನೆಗವೊರೆ ಬೊಮ್ಮ ಜಟ್ಟಿಗನೆ ನಾನು 2 ಮತ್ತೊರ್ವಳಿಂತೆಂದಳು ನಿಂನಮಗ ಹತ್ತಿ ಗವಾಕ್ಷಿಯಿಂದಾ ಬಚ್ಚಿಟ್ಟ ಬೆಣ್ಣೆಯನೆಲ್ಲಾವ ಮೆದ್ದಾನು ಮಕ್ಕಳಿಗಿಲ್ಲದಂತೆ 3 ಗಡಿಗೆ ಬೆಣ್ಣೆಯ ಮೆಲ್ವಾರೆ ಇವನ ಹೊಟ್ಟೆ ಕೆರೆಭಾವಿಯೇನೆ ಅಮ್ಮಾ ಹುಡುಗರಿಗೆ ಎಂದು ಬಚ್ಚಿಟ್ಟ ಬೆಣ್ಣೆಯನೆಲ್ಲಾ ಹೊಡೆದರವರ ಮಕ್ಕಳು 4 ಮಲಗೋಮಂಚದ ಮೇಲೆ ನಾ ಮಲಗೀರೆ ಮೊರೆವ ಹಾವನು ಪಿಡಿದು ಅರಿಯದಂತೆ ಬಂದು ಮುಸುಕಿ- ನೊಳಗಿಟ್ಟು ಅರಿಯಾದೆ ಹೋದನಂಮಾ 5 ಹರನಡುಗುವ ಹಾವನು ನಾ ಪಿಡಿವಾರೆ ತರಳಾನು ತಡೆಕಾರನೆ ಹರಕೆಯ ಹೊತ್ತುದವಪ್ಪಿಸದಿದ್ದರೆ ಗುರುತು ತೋರÀಲು ಬಂತೇನೊ 6 ಮಕ್ಕಳ ಪಡೆದವರುಯಿಲ್ಲದ ಕಳ ವಿಕ್ಕಲಿ ಬಹುದೆ ಕೃಷ್ಣಗೆ ಸಿಕ್ಕಿದ ತಪ್ಪು ಸಹಿತವೆ ತಂದರೆ ನಾನು ತಕ್ಕ ಬುದ್ದಿಯ ಪೇಳುವೆ 7 ಅಣುಮಯರೂಪ ಕಾಣೆ ನಿಂನಯ ಮಗ ಚಿನುಮಯ ರೂಪ ಕಾಣೆ ಚಿನುಮಯ ರೂಪ ಹೆಳ ವನಕಟ್ಟೆ ಆದಿಕೇಶವ ರಂಗನೆ8
--------------
ಹೆಳವನಕಟ್ಟೆ ಗಿರಿಯಮ್ಮ