ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

351ಆದಿತ್ಯದೇವ ತ್ವತ್ಪಾದಯುಗಳಕಭಿ ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ ವ್ಯಾಧಿಯ ಕಳೆದು ಸುಖವೀಯೊ 1 352ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನೊ ಸ ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ ಹ್ಮಜ್ಞಾನ ಭಕುತಿ ಕರುಣೀಸೊ 2 353 ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ ನಾರಾಧನೆಯನಿತ್ತು ಕರುಣೀಸೊ 3 353 ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ ವಾಹನನ ಸ್ಮರಣೆಯನು ಕರುಣೀಸೊ 4 354ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ ಹಾರ ಗೈಸೆನ್ನ ಭವತಾಪ 5 355 ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ ಹೃತ್ತಿಮಿರ ಕಳೆದು ಸಂತೈಸೊ 6 356 ಕೋಲ ಭೂನಂದನ ಪ್ರವಾಳ ಸಮವರ್ಣ ಕರ ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ ಮೌಳಿ ನೀಯೆನ್ನ 7 357 ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ ಅನುದಿನ 8 358 ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ ಕಾಮಿತಾರ್ಥವನೆ ಕರುಣೀಸೊ 9 359 ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ ಕ್ಷುಧೆಯ ಸಂಹರಿಸಿ ಸುಜ್ಞಾನ | ಸುಜ್ಞಾನ ಸದ್ಭಕ್ತಿ ಸುಧೆಯ ಪಾನವನೆ ಕರುಣೀಸೊ 10 360 ಚಂದ್ರನಂದನ ಸತತ ವಂದಿಸುವೆ ಮನ್ಮನದ ಮಮದೈವ ಸರ್ವ ಗೋ ವಿಂದನಹುದೆಂದು ತಿಳಿಸಯ್ಯಾ 11 361 ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ ದ್ಧಾರಗೈಸೆನ್ನ ಭವದಿಂದ 12 362 ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು ರ್ಮತಿಯ ಪರಿಹರಿಸಿ ಸುಜ್ಞಾನ ಸುಜ್ಞಾನವಿತ್ತು ಶ್ರೀ ಪತಿಯ ತೋರೆನ್ನ ಮನದಲ್ಲಿ 13 363 ಸುರರಾಜಗುರುವೆ ತ್ವಚ್ಚರಣಾರವಿಂದಗಳಿ ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ ಣರ ಸಂತೈಸೋ ದಯದಿಂದ 14 364 ತಾರಾರಮಣನೆ ಮದ್ಬಾರ ನಿನ್ನದೊ ಮಹೋ ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ ವಾರಿಸಿ ತೋರೊ ತವರೂಪ 15 365 ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ ಪ್ರಕ್ರಿಯವ ತಿಳಿಸೊ ಪ್ರತಿದೀನ 16 366 ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ ಶ್ರವಣ ಸುಖವೆನಗೆ ಕರುಣೀಸೊ | 17 367 ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ ಲಗದಲ್ಲಿ ಬುದ್ಧಿಯಿರಲೆಂದು 18 368 ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ ತ್ವರಿತದಿಂದಿಳಿಸಿ ಪೊರೆಯೆಂದು 19 369 ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ ಸಮಯದಿ ಶ್ರೀ ಲಕ್ಷ್ಮೀನಾ ರಾಯಣನ ಸ್ಮರಣೆ ಕರುಣೀಸೊ 20 370 ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ ಹರಿಮೂರ್ತಿ ಕೀರ್ತನೆಗೆ ಳೊದಗಲೆನಗೆಂದು ಬಿನ್ನೈಪೆ 21 371ಅಹಿಕ ಪಾರತ್ರಿಕದಿ ನರಹರಿಯದಾಸರ ನವ ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು ಅಹಿತರೆಂದೆನುತ ಕೆಡಬೇಡಿ22 372 ಜಗನ್ನಾಥವಿಠ್ಠಲನ ಬದಿಗರಿವರಹುದೆಂದು ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೋರು 23
--------------
ಜಗನ್ನಾಥದಾಸರು
ನೀನೆ ದಯಾನಿಧಿಯು ಶ್ರೀ ಗುರುರಾಯ ನೀನೆ ದಯಾನಿಧಿಯು ಧ್ರುವ ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ 1 ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ 2 ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮಾಧವ ನೀನೆ 3 ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದಿ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ4 ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟವು ವಿಷ್ಣವು ನೀನೆ 5 ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂದನನು ನೀನೆ 6 ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸ ಕೋಟಿ ದೇವರುಗಳಿಗಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ7 ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನ್ನವಗೊಲಿದ ಶ್ರೀ ವಾಮನ ನೀನೆ 8 ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ 9 ದಾಸರ ಕ್ಲೇಶಕಿಲ್ಮಿಷಗಳ ತೊಳೆದು ಅಂಬರಿಷ ರುಕ್ಮಾಂಗದಗೊಲಿದು ಶುಕ ಶೌನಕ ಪರಾಶರ ಮುನಿಗಳಿಗೆ ಹರುಷನಿತ್ತ ಹೃಷಿಕೇಶನು ನೀನೆ 10 ಕ್ಷಿತಿಯೊಳು ದೃಢ ಪತಿವ್ರತೆಗೊಲಿದು ಯತಿ ಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ 11 ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜ ಲೀಲೆಯು ತೋರಿದ ದುರಿತ ವಿಧ್ವಂಸನ ದೇವಕಿ ಪುತ್ರ ದಾಮೋದರ ನೀನೆ 12 ಸಿದ್ದ ಶರಣರಿಗೊಲಿದ ಸದ್ಗತಿ ಸುಖಸಾಧನ ಸಹದೇವಗದೋರಿದ ಸಂಭ್ರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ 13 ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ 14 ವಿದುರುದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ ಸ್ಥಿರಪದವಿತ್ತರೊಂದು ಮಂದಿಗೆ ಪ್ರಸನ್ನವಾದ ಪ್ರದ್ಯುಮ್ನನು ನೀನೆ 15 ಸೀತಾ ಸುದ್ದಿಯ ತಂದವಗೊಲಿದು ಹತ್ತು ತಲೆಗಳ ಇದ್ದವನಳಿದು ಕದ್ದುಬೆಣ್ಣೆಯ ಮುದ್ದೆಯ ಮೆದ್ದು ಉದ್ದವಗೊಲಿದ ಅನಿರುದ್ಧನು ನೀನೆ 16 ಸೋಕಿಸಿ ಪೂತಣಿಯ ಕಾಯವು ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮ ಪರುಷ ಪುರುಷೋತ್ತಮನು ನೀನೆ 17 ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಅಧೋಕ್ಷಜ ನೀನೆ 18 ನರನಾರಿಯು ನಾಂಟೀಶರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ 19 ಅನಿಳ ಸ್ನೇಹಿತ ಅಜಗ್ನಾನಗ ಒಲಿದು ಅಹಲ್ಯಾ ಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು ಅಚಲ ಪದವಿತ್ತುಚ್ಯುತ ನೀನೆ 20 ಜಗದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ 21 ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯುನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ 22 ಧರೆಯೊಳು ಭಕ್ತನ ಜನ್ಮವು ಹರಿಸಿ ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ ಸುರಮುನಿಗೊಲಿದ ಶ್ರೀ ಹರಿಯು ನೀನೆ 23 ಕಾಳಿ ಮಥನವು ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟ ನಾಟಕ ಶ್ರೀ ಕೃಷ್ಣನು ನೀನೆ 24 ಸಂಧ್ಯಾನದ ಸಾಹಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ ಪರಮ ದಯಾನಿಧಿಯು ನೀನೆ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು