(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು)
ಪಿಡಿಯೆನ್ನ ಕೈಯ ಜಗನ್ಮಯ
ಪಿಡಿಯೆನ್ನ ಕೈಯ ಪ.
ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ
ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ.
ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ
ಕಾಮುಕಪರದಾರಭ್ರಾಮಕತಾಮಸ-
ಧಾಮನ ಕಪಟವಿಶ್ರಾಮ ಕುಧೀಮನ
ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು
ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ 1
ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ
ಮೆಟ್ಟಿದ ನೆಲಮುನಿಯುವನ ಕೃತಘ್ನ ಕ-
ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ
ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ-
ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ2
ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ
ಅತ್ಯಂತ ಪಾಪಿ ಕುಚಿತ್ತ ಮದಾಂಧನು-
ನ್ಮತ್ತ ಮಾತಂಗವಿರಕ್ತಿವಿಹೀನನ
ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ
ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ 3
ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ
ಗುಣಗಣನಿಧಿ ಲಕ್ಷ್ಮೀನಾರಾಯಣಸಖ
ದಣಿಯಲೊಲ್ಲೆ ದಯಮಾಡೆನಗೀಗಲೆ
ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ
ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ 4