ಬಿಡು ಬಿಡು ಚಿಂತೆಯ ಮೂಢಾ ನ-
ಮ್ಮೊಡೆಯನುಪೇಕ್ಷೆಯ ಮಾಡ
ಬಡವರ ತಪ್ಪನು ನೋಡ ಸಂ-
ಗಡಲಿಹ ಗರುಡಾರೂಢ ಪ.
ನೆನೆವರ ಮನದಲ್ಲಿರುವ ನಿಜ
ಜನಕೆ ದಯಾರಸ ಸುರಿವ
ಕನವಿಕೆ ಎಂಬುದ ತರಿವ ಸ್ಮರ
ಜನಕ ಸಿರಿಯ ಕರೆತರುವ 1
ಮಾಡುವ ಕರ್ಮಗಳೆಲ್ಲ ಫಲ
ಕೊಡಿಸುವನು ಸಿರಿನಲ್ಲ
ರೂಢಿಪರೊಳಗಿರಬಲ್ಲ ಬೇ-
ರಾಡುವ ಮಾತೇನಿಲ್ಲ 2
ನೋಡಲು ಸಿಕ್ಕುವನಲ್ಲ ಬೇ-
ಗೋಡಿ ಪಿಡಿಯಲೊಶನಲ್ಲ
ದೂಡುವ ದೈತ್ಯರನೆಲ್ಲ ದಯ
ಮಾಡಲಿವಗೆ ಸರಿಯಿಲ್ಲ 3
ಸರ್ವತ್ರದಲಿ ಸ್ಮರಿಸುವನು ರಿಪು
ಪರ್ವತಗಣ ದುಶ್ಚ್ಯವನ
ಗರ್ವಿ ದೈತ್ಯವನದವನ ಸುರ
ಸಾರ್ವಭೌಮನೆಂಬುವನ 4
ಸತಿಸುತ ಗ್ರಹ ಭೂಧನಕೆ ಶ್ರೀ-
ಪತಿಯೆ ಪಾಲಕನಿದಕೆ
ವ್ಯಥೆಗೊಳದಿರು ದಿನದಿನಕೆ ಸ-
ಮ್ಮತಿನಹಿಗಿರಿಪತಿ ಘನಕೆ 5