(2) ಉಡುಪಿ ಕೃಷ್ಣ
ಕಂಡೇ ಕಡೆಗೋಲ ಪಿಡಿದನ ಉಡುರಾಜ ವದನನ
ಮಂಡೆಯೊಳ್ ಮಯೂರ ಪಿಂಛವನಿಟ್ಟನ ಪ
ಪಡುಗಡಲೆಡೆ ಉಡುಪಿಯೊಳಗಿಹ ಕಡಲಣುಗಿಯ
ಒಡೆಯಕೃಷ್ಣನ ಕಂಡೇ ಅ.ಪ
ಶ್ರಾವಣ ಕೃಷ್ಣ ಪ್ರಪಂಚಗುರುವ
ಸುಮಶರಪಿತ ಸುಮನೋಹರ ಶ್ಯಾಮಸುಂದರನ ಸ್ವಪ್ನದಿ 1
ಸತ್ಯವಂತರ್ಗಾಂ ಸತ್ಯಂ ಮುಕ್ತಿನಾಥಂ
ಉತ್ತಮತರಚಿತ್ತರಾದ ಭಕ್ತರ ಕಾಯವೆನೆಂದನ 2
ಸುಳ್ಳು ಸುಳ್ಳೆಂದು ಪೇಳುವ ಪೊಳ್ಳನ ಪಾಪಿಯ
ತಳ್ಳುವೆ ಸುಖವಿಲ್ಲದಿರುವ ಖುಲ್ಲರ ಜತೆಯೊಳಗೆಂದನ3
ಹರಿಶ್ಚಂದ್ರ ನಳರೊಲು ಕೀರ್ತಿಯನು ಪರ್ಬಿಸಿ
ಶರಣರ ಸುಖಸರಣಿಯಲ್ಲಿ ಕರುಣದಿಂದ ಕಾವೆನೆಂದನಾ4
ಕನಸುಮನಸಿನಲ್ಲಿಯೂ ಅನವರತ ತನ್ನಯ
ಘನಪದಯುಗವನಜ ತೋರಿ ಅನುವನೀವ ಜಾಜೀಶನ 5