ಯಾಕೆ ನಿನ್ನವರೊಳು ದೂರದೃಷ್ಟಿ ಪ್ರಭುವೆ
ಲೋಕಬಂಧು ದಯಾಸಿಂಧು ದಾಸಜನರರಸ ಪ
ಭ್ರಷ್ಟನಿವ ನಿತ್ಯದಲಿ ಮುಟ್ಟಿ ಸ್ನಾನಗೈಯನೆಂದು
ಬಿಟ್ಟಿ ಬೇಸರ ಮಾಡಿ ಸಿಟ್ಟಗೆದ್ದಿರುವ್ಯೋ
ಪುಟ್ಟಿ ಜತೆಗೂಡಿಲ್ಲೆ ಬಿಟ್ಟು ಅಗಲುವ ದೇಹ
ಎಷ್ಟು ತೊಳೆದರೇನೆಂದು ಗಟ್ಟಿಮಾಡಿಬಿಟ್ಟೆ 1
ಕಡುಹೀನ ಕುಲಯೋಗ್ಯ ಮಡಿ ಅರಿಯ ಇವನೆಂದು
ಕಡುಗೋಪದಿಂದೆನ್ನ ನುಡಿಕೇಳದಿರುವ್ಯೋ
ಮುಡಿಚೆಟ್ಟಿನಲಿ ಬಂದು ಕಡುಹೊಲಸು ತುಂಬಿರ್ದ
ಜಡದೇಹಕ್ಯಾತರ ಮಡಿಯೆಂದು ಬಿಟ್ಟೆ 2
ನಿತ್ಯನೇಮವರಿಯದ ಅತ್ಯನಾಚಾರಿಯೆಂದು
ನಿತ್ತರಿಸದೆನ್ನ ಮುಖವೆತ್ತಿ ನೋಡದಿರುವ್ಯೋ
ಪಿತ್ತ ರಕ್ತ ಮಜ್ಜ ಮಾಂಸ ಮತ್ತೆ ಮಲ ಮೂತ್ರ ಕ್ರಿಮಿ
ಹೊತ್ತ ಭಾಂಡಿದೆಂದರಿತು ನಿತ್ಯನೇಮ ಬಿಟ್ಟೆ 3
ಸತ್ಯಕರ್ಮದ ಮಹಿಮೆ ಗೊತ್ತಿಲ್ಲದಧಮ ಮಹ
ಧೂರ್ತ ಪಾತಕಿಯೆಂದು ಮರ್ತೆನ್ನಬಿಟ್ಟ್ಯೋ
ಎತ್ತನೋಡಲು ನೀನೆ ಸುತ್ತಿ ವ್ಯಾಪಿಸಿ ಜಗವ
ಹೊತ್ತು ಆಳುವುದರಿತು ಸತ್ಕರ್ಮ ಬಿಟ್ಟೆ 4
ನೀನೆ ನಿರ್ಮಿಸಿದಭವ ನಾನಾಲೋಕ ವೇದಶರ್ಮ
ನೀನೆ ವಿಶ್ವಾತ್ಮಕನೈ ನೀನೆ ಸೂತ್ರಧಾರಿ
ಧ್ಯಾನದಾಯಕ ಮಮಪ್ರಾಣ ಶ್ರೀರಾಮ ನಿನ್ನ
ಧ್ಯಾನವೊಂದೆ ಅಧಿಕೆಂದು ನಾನಾಕರ್ಮ ಮರೆದೆ 5