ಗಣಪತಿ
ಗಜಮುಖ ನಿನ್ನನು ಭಜಿಸುವೆ ಸತತದಿ
ನಿಜಮತಿಯನೆ ನೀಡೊ ಪ.
ಭುಜಗ ಭೂಷಣಸುತ ರಜತಮ ಕಳೆಯುತ
ಗಜವರದನ ತೋರೊ ಅ.ಪ.
ಮೋದಕಪ್ರಿಯನೆ ಆದರದಲಿ ನಿನ್ನ
ಪಾದಕೆ ಎರಗುವೆನೊ
ನೀ ದಯದಲಿ ಹರಿ ವಿಶ್ವರೂಪವ ನಿನ್ನ
ಹೃದಯದಿ ತೋರೋ 1
ಹಿಂಡು ದೈವಗಳಿಗೆ
ಇಂದು ಪ್ರಥಮ ನೀನೆ
ಕಂಡಮಾತ್ರ ನಿನ್ನ ವಿಘ್ನಗಳೆಲ್ಲವು
ಬೆಂಡಾಗುವುದಿನ್ನೆ 2
ಅಂಬರದಭಿಮಾನಿಯೆ ಸತತದಿ ಹರಿ
ಹಂಬಲ ನೀ ನೀಡೋ
ಕುಂಭಿಣೀಶ ಗೋಪಾಲಕೃಷ್ಣ
ವಿಠ್ಠಲನ ಮನದಿ ತೋರೋ 3