ಮುಯ್ಯದ ಹಾಡುಗಳು
ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ
ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ.
ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ
ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು
ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ
ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1
ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ
ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ
ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ
ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2
ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ
ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ
ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ
ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3
ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ
ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು
ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ
ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4
ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ
ದುರಗ ಬೆಳೆವ ಪೋರ ನೋಡೆ ಕರಿಯ ಕುವರನು
ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ
ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5
ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ
ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ
ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ
ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6
ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ
ಶೋಧಿಪರಿಗೆ ಸಕಲಾನಂದ ಸಾಧಕನೆಂದು
ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ
ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7