ನಾನಪರಾಧಿ ಶ್ರೀನಿಧಿ ದೇವ ಪ
ನಾನಪರಾಧಿ ನೀನದನೆಣಿಸದೆ
ದೀನವತ್ಸಲ ಎನ್ನ ಮಾನದಿಂದಲಿ ಕಾಯೊ ಅ.ಪ
ತನಯರಿಲ್ಲದೆ ಬಲು ಮನದೊಳು ಚಿಂತಿಸೆ
ಮನದಿ ಸಂಕಲ್ಪಿಸೆ ವನಜನೇತ್ರನ ದಯದಿ
ತನಯಳು ಜನಿಸಲು ಧನಮದದಲಿ ಮರೆತೆ 1
ಏನ ಪೇಳುವೆ ನಾನು ಧನದ ಮಹಿಮೆಯನ್ನು
ಹೀನ ಬುದ್ಧಿಯನಿತ್ತು ಹರಿಯ ಮರೆಸುವುದು
ದಾನವಾಂತಕ ಹರಿ ದೀನನಾಗಿಹೆನಯ್ಯ
ಸಾನುರಾಗದಿ ಸಲಹೊ ಸತ್ಯನಾರಾಯಣ 2
ಮಂಗಳರೂಪ ಕೃಪಾಪಾಂಗದಿ ನೋಡೊ
ರಂಗ ಶ್ರೀ ಕರಿಗಿರಿಯನಿಲಯ ಶುಭಾಂಗ
ಗಂಗಾ ಜನಕನೆ ಗಜರಾಜವರನೆ
ಭಂಗ ಬಿಡಿಸಿ ಕಾಯೊ ಭಕ್ತವತ್ಸಲ ದೇವ 3