ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು