ಯಾಕೆನ್ನ ದೂರುವರೆ ಪೇಳಮ್ಮಯ್ಯ
ಪೋಕಬುದ್ಧಿಯ ಗೊಲ್ಲತಿ
ಪೋಕ ಲೋಕಲೋಕದಿ ನೋಡೆ ನಾಕಾಣೆನೆಲ್ಲೆಲ್ಲೂ ಪ
ಅಮ್ಮಯ್ಯ ನೀನಿಡುವೊ ಪಾಲ್ಬೆಣ್ಣೆಯ
ಕಣ್ಣಿಂದ ನೋಡುವೆನೆ
ಅಣ್ಣ ರಾಮರ ಕೇಳೆ ಎನ್ನಾಣೆ ಹುಸಿಯಲ್ಲ
ಎನ್ನ ಪಣೆಯ ಲಿಖಿತ ಮುನ್ನ ಮಾಡಲಿ ಏನೆ 1
ದುಷ್ಟಹೆಂಗಳೇರಾಡುವೊ ಮಾತೊಂದು ನೀ
ಗೊತ್ತು ಹಿಡಿಯ ಬ್ಯಾಡಮ್ಮ
ಚಟ್ಟಿಗೆ ಬೆಣ್ಣೆಯ ಮೆಲುವೋದುಂಟಾದರೆ
ಪುಟ್ಟಕೂಸಿನ ಹೊಟ್ಟೆಗೆ ದೃಷ್ಟಿತಾಗದು ಏನೆ 2
ಚೆಂಡನಾಡುವಾಗ ಇವರು ಎನ್ನ
ಮುಂಗೈಯ ಪಿಡಿದುಕೊಂಡು
ಗಂಡರಂಜಿಕೆಯಿಲ್ಲ ಗಾಡಿಕಾರ್ತಿಯರೆಲ್ಲ
ಬಂಡು ಮಾತುಗಳಾಡಿ ಬಂದು ದೂರಿದರೇನೆ 3
ಸಣ್ಣ ಮಕ್ಕಳೊಡನೆ ಅಂಗಳದಿ ನಾ-
ಚಿಣ್ಣಿಯನಾಡುವಾಗ
ಬೆಣ್ಣೆಕೊಡುತೇವೆಂದು ಬಣ್ಣ ಬಣ್ಣದಿ ಎನ್ನ
ಕಣ್ಣು ಸನ್ನೆಯ ಮಾಡಿ ಕರೆದರ್ಯಾತಕೆ ಕೇಳೆ 4
ಗೋಲಿ ಗುಂಡುಗಳಾಡುತ ನಿಂತಿರಲೆನ್ನ
ಲೀಲೆಯಿಂದಲಿ ನೋಡುತ
ಭೀಮೇಶಕೃಷ್ಣ ಬಾರೆಂದೆನ್ನ ಬಿಗಿದಪ್ಪಿ
ಬಾಯ ತಂಬುಲಗಳ ಬೇಡಿ ಮಾತಾಡೋರು 5