ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ
ಖಗಕುಲರನ್ನ ಮನೋರಮಣ
ಮನೋರಮಣ ಕಾಂತ ಶ್ರೀರಾಮನ
ಅಗಲದಿರು ಕಾಣೆ ಮರಿಯಾನೆ ಶೋಭಾನೆ 1
ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-
ಕೃತ್ಯಕೆಲ್ಲಕ್ಕನುಸರಿಸಿ
ಅನುಸರಿಸಿ ನಡೆ ನೀ ಮಗಳೆ
ಹಿತವಾಗಿ ಬಾಳು ಪತಿಯೊಳು ಶೋಭಾನೆ 2
ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ
ಗಂಡನುಣ್ಣದ ಮೊದಲು ನೀ
ಮೊದಲು ನೀನುಣ್ಣದಿರು
ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3
ಮುಗುಳು ನಗೆಯ ಬೀರು ಜಗಳವ ಮಾಡದಿರು
ಜಗದೊಳು ಕೀರ್ತಿಯುತಳಾಗು
ಯುತಳಾಗು ಬಂಧುಗಳಲಿ ನೀ
ಹಗೆಯ ಮಾಡದಿರು ಕೃಪೆದೋರು ಶೋಭಾನೆ 4
ಪಾದ ಹೊದ್ದಿ ಸೇವೆಯ ಮಾಡು
ಸುದ್ಧ ಭಾವದೊಳು ನಡೆ ಮಗಳೆ
ನಡೆ ಮಗಳೆ ನಿತ್ಯಸುಮಂಗಲೆ
ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5
ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು
ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು
ನಿಲದಿರು ನೀರಜಗಂಧಿ
ಸತ್ಯ ವಚನವನೆ ಸವಿಮಾಡು ಶೋಭಾನೆ 6
ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು
ಸಾಧುಭಾವದದಲಿ ನಡೆ ಮಗಳೆ
ನಡೆ ಮಗಳೆ ಪಂಕ್ತಿಯಲಿ
ಭೇದ ಮಾಡದಿರು ಕೃಪೆದೋರು ಶೋಭಾನೆ 7
ಕಂಡರೆ ಶಿಷ್ಟರ ದಂಡ ನಮಸ್ಕರಿಸು
ಹಿಂಡು ದಾಸಿಯರ ದಣಿಸದಿರು
ದಣಿಸದಿರು ಉತ್ತಮಳೆಂದು ಭೂ-
ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8
ಚಂಡಿತನವ ನಿನ್ನ ಗಂಡನೊಳ್ಮಾಡದಿರು
ಗಂಡಸರ ಮುಂದೆ ಸುಳಿಯದಿರು
ಸುಳಿಯದಿರು ಸಂತತ ಸೌಖ್ಯ-
ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9
ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ
ಸಮಯದಿ ವೇಶ್ಯಾ ತರುಣಿಯಳ
ತರುಣಿಯಳ ತೆರದಿ ರಾಮನ ಸತಿಯಂ-
ತೆ ಮಾಡವ್ವ ಸುಖಂ ಜೀವಾ ಶೋಭಾನೆ 10
ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು
ಕುಕ್ಷಿ ಈರೇಳು ಜಗವನ್ನು
ಜಗವನ್ನು ನಮ್ಮನ್ನು ಸರ್ವರ
ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11