ಒಟ್ಟು 37 ಕಡೆಗಳಲ್ಲಿ , 15 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
ಆವರೀತಿಲಿ ಎನ್ನ ಕಾವದೇವರು ನೀನಿ ನ್ನಾವ ದೈವದ ಬಲವು ನಾನೊಲ್ಲೆ ಸ್ವಾಮಿ ಪ ಆವರೀತಿಲಿ ಬಿಡದೆ ನೀ ಎನ್ನ ಕಾಯೊ ಭಕ್ತರ ಜೀವದರಸನೆ ಭಾವಜಪಿತ ನಿನ್ನ ಬಿಟ್ಟ ನ್ನ್ಯಾವ ದೇವರು ಇಲ್ಲ ಎನಗೆ ಅ.ಪ ಕುಸುಮಾಕ್ಷ ತವಧ್ಯಾನ ನಿಶಿದಿವದೊಳು ಬಿಡದೆ ಹಸನಾಗಿ ಭಜಿಪಂಥ ಕುಶಲಮತಿ ನೀಡಿ ಪುಸಿಯ ಸಂಸಾರದ್ವೆಸನವಳುಕಿಸಿ ಅಸಮ ಸಂತಸಸುಖವ ಕರುಣಿಸಿ ಅಸುವುಪೋದರು ಪುಸಿಯನಾಡದ ಸುಶೀಲ ಮನವಿತ್ತು ಪೋಷಿಸಭವ 1 ಬಿಡದೆಕಾಡುವ ಎನ್ನ ಕಡು ಜಡಮತಿಯನ್ನು ಕಡಿದೊಡನೆ ನುಡಿಯಂತೆ ನಡೆಯನೆನ್ನೊಡಲಿಗೆ ಗಡನೆ ಸ್ಥಿರಮಾಡಿ ಎಡರು ತೊಡರಿನ ಜಡರಿನೊಳಗಿಂದ ಕಡೆಗೆ ನಿಲ್ಲಿಸಿ ಒಡೆಯ ನಿನ್ನ ಅಡಿದೃಢವನಿತ್ತು ಪಿಡಿದು ನೀ ಎನ್ನ ಬಿಡದೆ ಸಲಹೊ 2 ರತಿಪತಿಪಿತ ನೀನೆ ಗತಿಯೆಂಬ ಸಿದ್ಧಾಂತ ನುತಿಯ ಮಂತ್ರವನೆನಗೆ ಹಿತದಿಂ ಪಾಲಿಸು ಸತತ ನಿನ್ನನು ಸ್ತುತಿಪ ಭಕ್ತರ ಹಿತದ ದರುಶನ ಪ್ರಥಮವಿತ್ತೆನ್ನ ಗತಿಸದಂಥ ನಿಜಸ್ಥಿತಿಯ ಸಂಪದ ವಿತ್ತು ರಕ್ಷಿಸೋ ಶ್ರೀರಾಮ ಪ್ರಭುವೆ 3
--------------
ರಾಮದಾಸರು
ಈತನೆಂಥಮಹಿಮೆ ನೊಡಿರೆ ರಂಗಯ್ಯ ರಂಗ ಈತನೆಂಥ ಮಹಿಮ ನೋಡಿರೆ ಪ ಈತನೆಂಥ ಮಹಿಮ ಓರ್ವ ಮಾತೆಯುದರದಿ ಜನಿಸಿ ಮತ್ತೊಬ್ಬ ಮಾತೆಕೈಯಿಂದ ಬೆಳೆದು ಗೋಕುಲ ನಾಥ ನವನೀತಚೋರನೆನಿಸಿದ ಅ.ಪ ಕಾಳಕೂಟ ವಿಷವ ಕುಡಿಸಿದ ಆ ಮಾಯದೈತ್ಯಳ ಕಾಲನ ಆಲಯಕೆ ಕಳುಹಿದ ಮಡುವನ್ನು ಧುಮುಕಿ ಕಾಳಿ ಹೆಡೆಮೆಟ್ಟಿ ನಾಟ್ಯವಾಡಿದ ಗೋವುಗಳ ಕಾಯ್ದ ಬಾಲನೆಂದೆತ್ತೊಯ್ಯಲು ಬಂದ ಖೂಳ ಶಕಟನ ಸೀಳಿ ಒಗೆದು ಕಾಳಗದಿ ಧೇನುಕನ ತುಳಿದು ಬಾಲಲೀಲೆಯ ತೋರಿ ಮೆರೆದ 1 ಪರಿಪರಿಯ ಮಾಯದಿಂ ಕಾಡ್ವ ಭೂಭಾರಿಯಾಗಿ ಧರಣಿಜನರತಿಶಯದಿ ಬಳಲಿಸುವ ಪರಮಕಂಟಕ ದುರುಳ ಕಂಸನೆಂಬುವನ ಶಿರವ ತರಿದ ಮಾಧವ ಧರಣಿತಾಪವನ್ನೆ ಕಳೆದು ಸೆರೆಯ ಬಿಡಿಸಿದ ಜನನಿ ಜನಕರ ಮಹಿಮೆ ತೋರ್ದ 2 ಗೊಲ್ಲ ಬಾಲರ ಸಮೂಹವನು ನೆರೆಸಿ ಮನೆಯಲ್ಲಿ ಯಾರು ಇಲ್ಲದ ಸಮಯವನೆ ಸಾಧಿಸಿ ಮೆಲ್ಲಮೆಲ್ಲನೆ ಎಲ್ಲ ಬಾಲರ ಒಳಗೆ ತಾ ಹೊಗಿಸಿ ಪಾಲ್ಮೊಸರು ಸವಿಸಿ ಕಳ್ಳ ಕೃಷ್ಣೆಮ್ಮ ನಿಲ್ಲಗೊಡನೆಂದು ಗೊಲ್ಲಸ್ತ್ರೀಯರು ಗುಲ್ಲುಮಾಡಲು ನಿಲ್ಲದೋಡಿ ತಾ ಪುಲ್ಲನಾಭನು ಎಲ್ಲಿ ನೋಡಿದರಲ್ಲೆ ತೋರುವ 3 ಶಿಶುವು ಈತನೆಂದು ಮುದ್ದಿಸುವಾಗ ಕುಶಲದಿಂದಪ್ಪಿ ಅಧರ ಸವಿಯುವ ಎಂಥ ಶಿಶುವನೆ ಹಸುಮಗಾಗೆಳೆದೊಯ್ದು ರಮಿಸುವ ಮಿಸುಗಗೊಡನಿವ ಕಸಿದು ಭಾಂಡ ದೆಸೆದೆಸೆಗೆ ಎಳೆದು ವಸುಧೆಯೊಳು ತನ್ನ ಅಸಮ ಮಹಿಮೆಯ ಪಸರಿಸಿದ ಹರಿ4 ಮಣ್ಣು ತಿಂದು ತಾಯ ಬಳಿಗೈದಕಂದ ಏನಿದು ಮಣ್ಣು ತಿನ್ವರೆ ಉಗುಳೆಂದೆಶೋದೆ ಕಣ್ಣು ತಿರುವÀಲು ತನ್ನ ಬಾಯೊಳ್ಬ್ರಹಾಂಡ ತೋರಿದ ಭಿನ್ನವಿಲ್ಲದ ತನ್ನ ತಾನು ಅರಿಯದೆಶೋದಿನ್ನು ಈರೂಪವಡಗಿಸೆನ್ನಲು ಸಣ್ಣಮಗುವಾಗಿ ಚಿಣುಫಣುವಿಡಿದುನ್ನ - ತೋನ್ನತ ಆಟವಾಡಿದ 5 ಪರಿಪರಿಯಲಿ ಕಾಡ್ವ ಕೃಷ್ಣನ್ನ ವರದೇವಿ ತಡೆಯದೆ ಸರವೆನಡುವಿಗ್ಹಚ್ಚಿ ತರಳನ್ನ ಸರಸರನೆ ಬಿಗಿದು ಒರಳಿಗ್ಹಾಕಿ ಕಟ್ಟಿ ಮುರಹರನ ಮರೆಯಾಗಲಾಕ್ಷಣ ಊರುತಂಬೆಗಾಲು ಊರಬೀದಿಲಿ ಒರಳನೆಳೆಯುತ ಹೊರಗೆ ಹೋಗಿ ತರಗುಳಿರಕಿಲದೊರಳ ಸೇರಿಸಿ ಮುರಿದು ಶಾಪದಿಂ ಮುಕ್ತಮಾಡಿದ 6 ಪುಂಡತನದಿಂ ಸೊಕ್ಕಿಮರೆಯುವ ಆ ರುಗ್ಮನಿಡಿಕೈಯ ಬಂಡಿಗಾಲಿಗೆ ಕಟ್ಟಿ ಶ್ರೀಧರ ರುಗ್ಮಿಣಿಯನ್ನು ಕೊಂಡು ಗೋಕುಲ ಸೇರಿ ವೈಭವ ನಡೆಸಿ ಯಾದವ ರ್ಹಿಂಡಲಿಗೂಡಿಸಿ ಪುಂಡದೇವಿಯುದ್ದಂಡತನದಿ ಕೈ ಕೊಂಡ ಕಲ್ಯಾಣ ಗಂಡುಗಲಿಗಳ ಗಂಡನೆನಿಸಿದ ಹಿಂಡುದೇವರ ಸಾರ್ವಭೌಮ 7 ಚರಣದಾಸರ ಒಡೆಯ ತಾನಾದ ವರ್ಣಿಸಲಳವಲ್ಲ ಚರಣದಾಸರ ದಾಸನೆನಿಸಿದ ಪುಸಿಯಲ್ಲ ಕೇಳಿರಿ ನರನ ಕುದುರೆಯ ವಾಘೆಯನು ಪಿಡುದು ರಥವ ನಡೆಸಿದ ಕರೆಯಲೋಡಿದ ಸರಸಿಯಲ್ಲಿಗೆ ಭರದಿ ಒದಗಿದ ಕುರುಪಸಭೆಯಲ್ಲಿ ಪರಮ ನಿಗಮಗಳ್ಗಿರುವನಗೋಚರ ಸ್ಮರಿಸಿದವರಿಗೆ ಭರದಿ ನೆರವಾದ 8 ತಾಳಿಬಂದ ನಾರಾಯಣಾವತಾರ ಪಾಲಿಸಲು ಜಗವಂ ಬಾಲಗೋಪಾಲ ಭಕ್ತರಾಧಾರ ಗೊಲ್ಲನೆನಿಸಿ ಲೀಲೆನಡೆಸಿದ ಶಾಮಸುಂದರ ಭವಜಾಲಪರಿಹರ ಕಾಳರಕ್ಕಸರೊಳು ಕಾದಿ ನಿರ್ಮೂಲಮಾಡಿ ಜಗಪಾಲಿಸಿದ ತ್ರಿ ಜಾನಕಿಲೋಲ ಶ್ರೀರಾಮ 9
--------------
ರಾಮದಾಸರು
ಎಂಥ ಕೆಲಸಮಾಡಿ ಬಂದನೇ ಗೋಪ್ಯಮ್ಮ ನಿನ ಮಗ|| ಎಂಥ ಕೆಲಸ ಮಾಡಿ ಬಂದ ಕಾಂತ ಮಯೊಳಿಲ್ಲದಾಗ ಚಿಂತೆಲೇಶವಿಲ್ಲದೆ ಬಂದು ಚಿದುಗ ಬುದ್ಧಿತೋರಿ ಆಗ ಪ ಮಲಗಿ ಇರಲು | ಹೊಡಕೊಂಡು ಯಾರು ಹೋದರಂದನೆ ಈ ಮಾತು ಕೇಳಿ ಗಂಡ ಆಕಳ ಹುಡುಕ ಹೋದನೆ ಸುತ್ತಿ ಗಂಡನೆಂದು ಕೂಡೆಂದೆನ್ನ 1 ಬಟ್ಟೆ ಬಿಡಿಸಿ ಭಯವಿಲ್ಲವೆಂದನಮ್ಮ ಮಾನವುಳ್ಳ ಸ್ತ್ರೀಯರ ಸಂಗ ಸ್ನಾನಕ್ಕಾಗಿ ನದಿಗೆ ಹೋಗಿ ಸ್ನಾನಮಾಡೊ ನೀರೊಳು ನಿಂತೆನೆ ಆವೇಳೇ ಬಂದು ಕಾಣದ್ಹಾಗೆ ಶೀರಿ ತೆಗೆದನೆ ನಾನು ಕಾಣದೆ ಉಡಲು ಹೋದೆ ಕಾನನದೊಳು ಕೈಯ್ಯ ಪಿಡಿದು ಏನು ಮಾನ ಕಳದನಮ್ಮಾ 2 ಹೆಂಗಳೆರು ಎಲ್ಲ ಕೂಡಿ ಗಂಗಾಕ್ರೀಡೆನಾಡೋ ವೇಳೆ ಅಂಗವಸ್ತ್ರÀವನೆಲ್ಲ ತೆಗೆದನೆ ತೆಗೆದು ಮರದ ಟೊಂಗೆನೇರಿ ಕಾಡುತಿಹನೆ ಭಂಗ ಅಂಗವ್ರತವೆಲ್ಲ ಕೆಡಿಸಿರಂಗ ' ಹೆನ್ನೆ ವಿಠಲ’ ಶ್ರೀರಂಗಧಾಮನೆನೆಯಿರೆ 3
--------------
ಹೆನ್ನೆರಂಗದಾಸರು
ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ ಇಲ್ಲದೆ ಪೋದರೆ ನಿಲ್ಲದೆ ಏನನು ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ ಕೊಡಲಿ ಹೊತ್ತು ಬರುತಾನ ತಾಯಿ ಗಡನೆ ಹೊರಳಿ ನೋಡಿನ್ನ ಬಡವರ ದಯಾನಿಧಿ ಕಡುಬಾಧೆ ಕಂಡರೆ ತಡೆಯದೆ ನಿನ್ನನು ಕಡಿಯದೆ ಬಿಡನವ್ವ 1 ತಂದೆವಚನ ಪರಿಪಾಲನು ಅವ ಬಂದರೆ ನಿನ್ನನು ಕೊಂದಾನು ಕಂದನ ಬಂಧನ ಚಂದದಿ ಕಳೆದಾ ನಂದವ ಕೊಡು ಕೊಡು ಸುಂದರಮುಖಿಯೆ 2 ಕಾರ್ತವೀರ್ಯ ತಂದಾನೇ ಈ ವಾರ್ತೆ ಕೇಳಲು ನಿನ್ನ ಬಿಟ್ಟಾನೇ ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ 3
--------------
ರಾಮದಾಸರು
ಓಡುತ ಹೋಗುತಾದೋ ಹೊತ್ತು ನೀನು ನೋಡೇನೆಂದರೆ ಆಗದು ಮತ್ತು ಪ ಬೇಡಲು ಬಿಡದೆಲೊ ಹೆಡತಲೆಮೃತ್ಯು ಹುಡುಕಾಡಿ ಪಡಕೋ ನೀ ಕೆಡದ ಸಂಪತ್ತು ಅ.ಪ ಗಜಿಬಿಜಿಸಂಸಾರ ಸೂಡಿಗೆ ನೀನು ಗಿಜಿಗಿಜ್ಯಾಗದೆ ನಿಲ್ಲು ಕಡೆಗೆ ಸುಜನರಿಗೊಂದಿಸಿ ಭುಜಗಾದ್ರಿಶಯನನ ನಿಜಪದ ಮಜದಿಂದ ಭಜಿಸಿಕೋ ತುರ್ತು 1 ಕಾಳನಾಳಿನ ದಾಳಿಗೆಲಿದು ಸ್ಥಿರ ಬಾಳುವ ನಿಜಪದವರಿದು ನೀಲಶಾಮನ ಲೀಲೆ ಮೇಲೆಂದ್ಹಿಗ್ಗುವ ದಾಸ ರ್ಹೇಳಿಕೆ ಕೇಳಿ ನೀ ಪಾಲಿಸು ತುರ್ತು 2 ನಡೆನುಡಿ ಎರಡೊಂದೆ ಮಾಡೊ ಇನ್ನು ಜಡಮತಿ ಗಡನೆ ಈಡ್ಯಾಡೋ ಪೊಡವಿಗಧಿಕ ನಮ್ಮ ಒಡೆಯ ಶ್ರೀರಾಮನೆಂ ದ್ಹೊಡಿ ಹೊಡಿ ಡಂಗುರ ದೃಢವಾಗಿ ಅರ್ತು3
--------------
ರಾಮದಾಸರು
ಕಂಡೆನೆನ್ನ ದೊರೆಯ ಲಕುಮಿಯ | ಗಂಡನೆನಿಪ ಹರಿಯ ಪ ಕುಂಡಲಿಶಯನನಿರುವ ಪರಿಯ | ಪದ ಪುಂಡಲೀಕ ಸೇವಿಪ ಪರಿಯ ಅ.ಪ. ಸಿರಿರಂಗ ಪುರಿಗೆ ಬಂದು | ವಿರಜಯೆನಿಪ ವರ ಕಾವೇರಿಯೊಳು ಮಿಂದು ನಿರುಪಮ ರಂಗಮಂದಿರದಿ ನಿಂದು | ನಮ್ಮ ಸಿರಿ ರಂಗರಾಜನ ಕಂಡೆನಿಂದು 1 ಇಂದೆನ್ನ ಭಾಗ್ಯಕೆಣೆಯಿಲ್ಲ ಈ ಮಂದಸ್ಮಿತನ ಕಂಡೆನಲ್ಲ ಹಿಂದಿನ ಪುಣ್ಯ ಫಲಿಸಿತಲ್ಲ ಇನ್ನು ಮುಂದಕೆ ಬಹು ಸಾಧನವಾಯಿತಲ್ಲ 2 ವಾಸುಕಿಶಯನನಾಗಿರುವ | ಬಲು ಸೋಸಿನಿಂದ ಗರುಡನೇರಿ ಮೆರೆವ ದೋಷರಾಶಿಗಳ ತರಿವ | ತನ್ನ ದಾಸರ ಪ್ರೀತಿಯಲಿ ಪೊರೆವ 3 ಇಂದಿರೆ ರಮಣನಂದನ ಕಂದ | ತಾನು ಇಂದೆನಗೆ ಒಲಿದು ದಯದಿಂದ ಸಂದರುಶನವಿತ್ತು ಆನಂದಾಮಿಗೆ ಪೊಂದಿಸಿ ದಾಟಿಸಿದ ಭವದಿಂದ4 ಸಂದು ಹೋದವಘಗಳೆಲ್ಲವೆಂದ | ಇನ್ನು ಮುಂದೆನಗೆ ಭಯವಿಲ್ಲವೆಂದ ಸುಂದರ ರಂಗೇಶವಿಠಲ ಬಂದ | ಮನ ಮಂದಿರದಿ ನೆಲೆಯಾಗಿ ನಿಂದ 5
--------------
ರಂಗೇಶವಿಠಲದಾಸರು
ಕಂಡೆಯಾ - ಮನವೇ - ನೀನಿಂದು - ಕಂಡೆಯಾ ಪ ಕಂಡೆಯ ಮನವೆ ನೀನಿಂದು - ತನ್ನತೊಂಡರ ಸಲಹುವ ಬಂಧು - ಆಹಮಂಡೆಯ ಬೋಳಿಸಿ | ಪುಂಡರೀಕಾಕ್ಷನೆಹಿಂಡು ದೈವಂಗಳ | ಗಂಡನೆಂದೇಳ್ವರ ಅ.ಪ. ಪಾದ ಸೊಬಗು - ವೇಗತೆರಳುತ್ತಿದ್ದರದು ಮೆಲ್ಲಗು - ನಖವರರತ್ನ ಕೆಂಪಿನ ಬೆಡಗು - ಊರುಕರಿಯ ಸೊಂಡಿಲಿನಂತೆ ಬೆಳಗು _ ಆಹ ಪರಿಶುದ್ದ ಕಟಿಯಲ್ಲಿ | ಸುರಚಿರಾಂಬರನುಟ್ಟುವರಕಂಠ ಫಣೆಯುದರ | ತ್ರಿವಳಿಯಂ ಮೆರೆವರ 1 ಮೃದುರೋಮ ಶಾಲು ಪ್ರಾವರಣ - ನೋಡಲದು ಭಾಸ ಉದಯಾರ್ಕ ವರಣ - ಪೋಲ್ವದದು ಮೇರು ಗಿರಿಯಂತೆ - ವರ್ಣ ನೋಡುಎದೆಯ ವಿಸ್ತರಾ ಭರಣ - ಆಹಸದಮಲುನ್ನತಾಂಸ | ಉರುಟು ನೀಳದ ತೋಳುಪದುಮ ರಾಗದ ಭಾಸ | ಧ್ವಜರೇಖೆ ಹಸ್ತವ 2 ಮೋದ ಪೋಲ್ವ - ಮತ್ತೆಮಂದ ದೂರನು ಅತಿ ಚೆಲ್ವಾ - ಆಹಕುಂದಾಭ ರದನವು | ಸುಂದರಾರುಣ ಓಷ್ಠಮಂದಜೇಕ್ಷಣ ನೋಟ | ದಿಂದ ಬೀರುವ ಮುದ 3 ಕಿವಿಗಳಲೊಪ್ಪುವ ತುಳಸೀ - ಮೂರುಭುವನ ಭೂತಿ ಭ್ರೂವಿಲಾಸಿ - ಮತ್ತೆಅವನೆ ಅಭೂತಿದನೆನಿಸೀ - ಚೆಲ್ವದವಡೆಯಿಂದೊಪ್ಪುವ ಶಿರಸಿ - ಆಹಅವಯವ ಲಕ್ಷಣ | ಪ್ರತಿ ಪ್ರತಿ ಜನ್ಮದಿವಿವರವೀತೆರವೆಂದು | ವಿಭುದರು ತಿಳಿದರು 4 ಈ ವಿಶ್ವವೆಲ್ಲವೂ ಸತ್ಯ - ಮತ್ತೆಸಾರ್ವ ಭೇದವು ತಾರತಮ್ಯ - ವಿಧಿಪೂರ್ವಕಲ್ವೊರೆಯುತ್ತ ದಿವ್ಯ - ತತ್ವಸಾರ್ವವ ಪೇಳುತ್ತ ಭವ್ಯ - ಆಹಕಾವ ಕೊಲ್ಲುವ ಗುರು ಗೋವಿಂದ ವಿಠಲನೆಸರ್ವೋತ್ತುಮಾನೆಂದು | ಈ ವಿಧ ಮೆರೆವರ 5
--------------
ಗುರುಗೋವಿಂದವಿಠಲರು
ಕೂಗಿದರು ಒಳಗೇ ಕದವ ತೆಗೆಯಂದು ಪ ಸತಿಯರು ತಾವು ಆಗ ಆನು- ನಿನ್ನ ನಾವು ಬಲ್ಲೆವು 1 ಮೆಲ್ಲನÉ ಬಾರೆ ನೀ ನಿಜವ ಮಾಡೀಗ 2 ಮನೆಯೊಳಿರಲು ' ಮಾರಜನಕನೆಂಬೊದು ಬಲ್ಲೆನೆ 3 ಇನ್ನು ನೀರೆ ನಿನ್ನ ಗಂಡನೆ ನಾನು ಓಯನ್ನ ಪ್ರಾಣಸಖಿ ಬೇಗ ಬಂದು ಕದವ ತೆಗೆ ಈಗ 4 ಎಲ್ಲಿಯವನು ಭಂಡತನ ಬಿಡುಇನ್ನು 'ಓಹೆನ್ನೆ ವಿಠಲ’ ಮಾಡುವದು ಇದು ರೀತಿಯಲ್ಲವು 5 ಚಂಡಿನಾಟ ಬಾ ಸಭಯದಿ ಓಯನ್ನ ಪ್ರಾಣಸಖಿ ಚಲುವೆ ಹೊರಗೆ ಬಾರದಿರುವೇ 6 ಅಷ್ಟು ಜಗದಲ್ಲಿ ಬಲ್ಲಿ 'ಓಹೆನ್ನೆ ವಿಠಲ’ ಚೇಷ್ಟಿಮಾಡದಲೆ ನಡಿಯಯ್ಯಾ 7 ದೇವರನ್ನು ಕೂಡಿತೆ ಓಯನ್ನ ಪ್ರಾಣಸಖಿ ಈಗ ಆಣಿ ಮಾಡಿಸಿ ಕೇಳು 8 ಅತ್ತಿಯನ್ನು ಕೂಡಿದವನೆ ಉತ್ತಮನೆ ನೀನು ಇನ್ನು ಎತ್ತಲ ಆಣೆಯು ನಿನಗೇ 'ಓ ಹೆನ್ನೆ ವಿಠಲ’ ಸತ್ಯವಂತನಾಗಿ ಹೇಳುವಿ 9 ಕಾಕು ಹೆಣ್ಣು ನಿನಗೆ ಥರವೆ ಓಯನ್ನ ಪ್ರಾಣಸಖಿ ಕಣ್ಣಿಲೆ ನೋಡದೆ ಕರಿಯೆ 10 ಪರಮ ಪರುಷನುಳ್ಳವರು ಪರಮಪುರುಷನ ಪಡೆವಂಥ ದೂರನಡಿಯೆ ಇಲ್ಲಿ ಎನಯ್ಯ 11 ಇನ್ನು ಸ್ವಲ್ಪ ನಿನಗೆ ತಿಳಿಯದೆ ಓಯನ್ನ ಪ್ರಾಣಸಖಿ ಸಾಗಿ ಬಂದು ನೋಡೆ ಬೇಗನೆ 12 ಏನು ಆಶ್ವರ್ಯವು ನಿನಗೆ ನಡಿಯಯ್ಯಾ 13 ಇನ್ನು ನಿನಗೆ ಇನ್ನಾದರೆ ಮನಸಿಗೆ ತಾರ 14 ನಿನಗೆ ಅರುವು ಇರಲು ಸೋಗು ಮಾಡಿನಡಿಯಯ್ಯಾ 15 ತಿಳಿಸುವೆನು ಮನಸು ಇಟ್ಟು ಮನ್ನಿಸೆನ್ನನು ಓಯನ್ನ ಪ್ರಾಣಸಖಿ ಮಾಡಬೇಡ ಹೀಗೆಯನ್ನನು 16 ಮರ್ಮವು ತಿಳಿಯದೆ 'ಒಹೆನ್ನೆವಿಠಲ’ ಮೋಸಮಾಡ ಬಂದಿ ನಡಿಯಯ್ಯಾ 17 ಹೇಳಿ ಎಲ್ಲರು ಹಿಗ್ಗುವ ವೇಳ್ಯೆದಿ 'ಓ ಯನ್ನ ಪ್ರಾಣಸಖಿಕೇಳಿದ ಮಾತನು ಹೇಳುವೆ 18 ಬಂದು ವಾಸವಾಗಿ ಹೇಸದೆ ಏನೆಂದು ಬಂದೆ 19 ಮಾನ ಪತಿಯೆಂಬ ಮಾರ್ಯದೆ ಓಯನ್ನ ಪ್ರಾಣಸಖಿ ಮನಸಿನಲ್ಲಿ ಏನು ಇಲ್ಲವು 20 ಮುನಿವಳಗೇ ಮಾನಪತಿ ಪುರುಷನೇನಯ್ಯಾ 21 ಮಾಡಿಕೊಳ್ಳದವನಿಗೆ ಧೈರ್ಯ ವಿಲ್ಲವೆ 22 ಅಂಜಿಕೆ ಏನಯ್ಯಾ 'ಓಹೆನ್ನೆ ವಿಠಲ’ ಧೈರ್ಯವು ಯಾಕೆ ನಿನಗಯ್ಯ 23 ಬಂದು ಇಷ್ಟು ತಡ ನಿನ್ನ ಗಂಡನೆನಾನು24
--------------
ಹೆನ್ನೆರಂಗದಾಸರು
ಕೊಡುವೆ ತಾಂಬೂಲವ ಪಿಡಿಯೊ ಪಿಡಿಯೊ ದೇವಾ ಅಡಿಗಳಿಗೆರಗುವೆನಾ ಪ ವಿಪ್ರ ಮಡದಿಯರನ್ನವ ಕೊಡಲು ಭುಂಜಿಸಿದ ಪಾಲ್ಗಡÀಲ ಶಯನ ಕೃಷ್ಣ ಅ.ಪ ಮಡದಿಯ ನುಡಿಕೇಳಿ ಕಡುಭಕುತಿಯಲವ ಪಿಡಿಯವಲಕ್ಕಿಯನು ಕೊಡಲು ಭುಂಜಿಸಿಮಿತ್ರ ಬಡವ ಸುದಾಮನಿಗೆ ಕೆಡದ ಸಂಪದವನ್ನು ಗಡನೆ ನೀಡಿದ ದೇವಾ1 ಕುಬ್ಜೆಗಂಧಕೆ ಒಲಿದು ಕಬರಿಯ ಪಿಡಿದೆತ್ತಿ ಸುಭಗರೂಪಳ ಮಾಡಿದ ಅಬ್ಜನಾಭನೆ ತ್ವತ್ಪಾ- ದಬ್ಜಕರ್ಪಿಸಿದಂಥ ಶಬರಿಯ ಫಲಮೆದ್ದ ಪ್ರಭು ಶ್ರೀರಾಮನೆ ನಿನಗೆ 2 ಲಲನೆ ದ್ರೌಪದಾದೇವಿ ಗೊಲಿದಕ್ಷಯಾಂಬರ- ಗಳನೆ ಪಾಲಿಸಿಪೊರೆದ ಬಲುವಿಧ ಭಕುತರ ಬಳಗವ ಸಲಹಲು ಇಳೆಯೊಳು ಕಾರ್ಪರ ನಿಲಯ ಶ್ರೀ ನರಹರಿಯೇ3
--------------
ಕಾರ್ಪರ ನರಹರಿದಾಸರು
ಗಂಡನೆ ಪ್ರಾಣಗಂಡನೇ ಪ ತಿಂಡಿಬಟ್ಟೆಗೆ ತಂದು ಹಾಕದೆ ಜಿಣುಗುವಅ.ಪ ಲಿಬ್ಬಿಯಿದ್ದರೆ ತೆಗೆದು ತಾರೆಂಬನು ಅಬ್ಬರಿಸುತ ಕೂಗಿ ಕೈಯ್ಯೆತ್ತಿ ಬರುವನು ಒಬ್ಬರಗೊಡವೆ ನಮಗ್ಯಾಕೆ ಎಂಬುವನು 1 ಸೀರೆ ಕುಪ್ಪಸಕೇಳೆ ಚೀರುತ್ತಯಿಲ್ಲೆಂಬ ಯಾರೆ ನಿನಗೆ ಬಲಯೆಂಬುವನು ಸೋರುವ ಮನೆಯಂತೆ ಎನ್ನ ಸಂಸಾರ 2 ಬಟ್ಟೆ ಮಾತಿನ್ನೇನು ಯಣ್ಣೆಕಾಣದು ತಲೆಯೇನ್ಹೇಳಲಿ ಕಣ್ಣುಕಾಣದೆ ನಮ್ಮಪ್ಪಯಿವಗೆ ಕೊಟ್ಟ ಗನ್ನಘಾತಕನಿವ ಕಲಿಕಾಲಜಗಳ 3 ಓದುಬರಹಗಳೆಂಬ ಹಾದಿಯ ತಾಕಾಣ ಆದದ್ದಾಗಲಿಯಿನ್ನೇನು ಮಾಡುವೆನಾನು 4 ಇರುಳು ಹಗಲುಯನ್ನ ಕರೆಕರೆ ಪಡಿಸುವ ಚರಣಕಮಲವೆನಗೆ ದೊರೆಯುವುದ್ಹ್ಯಾಗೆ 5
--------------
ಗುರುರಾಮವಿಠಲ
ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಪ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ 1 ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು | ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ | ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ | ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ | ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ | ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ 2 ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ | ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು | ಹುರುಳಗೆಡಿಸಿ ನೋಡುವೆ | ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ | ತ್ತರ ಅನುತ್ತರನಾಡುವೆ | ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ 3 ಅಪರಾಧವೇನಯ್ಯಾ ವಿಪರೀತ ತೋರದೆ | ಅ | ಪರಿಮಿತ ಪರಮಹಿಮನೆ | ಉಪಕಾರಕ್ಕಪಕಾರವೊ | ನಿಪುಣತನವಿರಲಿಲ್ಲವೊ | ಸಪುತೆರಡು ಲೋಕದೊಳಗಾನೆಂದು ಇದ್ದೆನಿಲ್ಲವೊ | ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ4 ಪರದೈವ ನಾನೆಂದು ಪೇಳುವರ ಗಂಡನೆ | ಸರಿಗಾಣೆ ಈ ಮಹಿಯೊಳು | ಪತಿ | ಕರಿಸಿ ನಿಜಕರವ ಪಿಡಿಯಾಡದೆ | ಪರಮೇಷ್ಠಿ ಹರಿದು ತಲ್ಲಣಿಸಿ ನೆರದು ಭೀಕರಗೊಂಬರು | ಪರಮಾಣು ರೂಪ ಭಕ್ತರ ಪರುಶ | ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ5
--------------
ವಿಜಯದಾಸ
ಜೋಕೆ ಮಾಡೆನ್ನ ನಮ್ಮಯ್ಯ ರಂಗ ಜೋಕೆ ಮಾಡೆನ್ನ ಪ ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ ಜೋಕಿನೊಳು ಇರಿಸು ದೇವ ಅ.ಪ ನಿಗಮಗೋಚರನೆ ಜಗದಯ್ಯ ವಿಜಯ್ಯ ಖಗಪತ್ವಾಹನನೆ ಅಗಧರನೆ ಈರೇಳು ಜಗವ ರಕ್ಷಿಪನೆ ರಘುಕುಲಾರ್ಯನೆ ಮಗನಬಗೆ ಕೇಳು ಕರುಣದಿಂದಲಿ ನಿಗಮಾತೀತನೆ ಮುಗಿವೆ ಕರಮಂ ಹಗಲು ಇರಲು ಸುಗುಣಿ ಸಂತರ ಸಂಗಸುಖ ಎನಗಗಲಿಸದೆ ಹರಿ 1 ಮೆರೆವವೇದವ ವರಸ್ಮøತಿಶಾಸ್ತ್ರವ ಕರುಣಿಸೈ ದೇವ ಪರಿಹರಿಸು ಎನ್ನ ಮರವೆ ಮಾಯವ ವರಭಕ್ತ ಜೀವ ಮರವೆ ಮಾಯದಿ ಸಿರಿಯವರ ತವಪರಮ ಚರಿತವ ಅರಿವು ನಿಲ್ಲಿಸಿ ಕರುಣದಿಂ ತವ ಚರಣಕುರುಹನು ಕರುಣಿಸಭವ 2 ದೃಢದಿ ಬೇಡುವೆನು ತಡಿಯೆನೀಭವ ಎಡರುತೊಡರನು ಗಡನೆ ಬಿಡಿಸೆನ್ನ ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು ನುಡಿಸು ಎನ್ನ ಮೆಲ್ನುಡಿಯೊಳನುದಿನ ಬಿಡದೆ ತವ ಕೊಡು ಗೂಢಮಂತ್ರವ ಬಿಡದೆ ಕೊಡು ನಿನ್ನಡಿಯ ದಾಸರ ಸಡಗರದ್ಯನ್ನೊಡೆಯ ಶ್ರೀರಾಮ 3
--------------
ರಾಮದಾಸರು
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆ ಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ. ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆ ಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ 1 ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆ ಪಾವಮಾನಿ ಪರೇಶ ಪದ್ಮಜ ಭಾವಿ ಯತಿಕುಲರಾಜನೆ 2 ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆ ಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ