ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ
ನಿಷ್ಠರುದೋರದಂತಾದರು ಮಾ ಧ್ರುವ
ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು
ನಿಷ್ಠರಿಗಾಟ್ಲಿ ತಂದರು ಮಾ
ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ
ಬಟ್ಟೆಗ್ಯಳದಿನ್ನು ತಾಹರು ಮಾ
ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು
ನೆಟ್ಟ ನೇರಿಷ್ಟ ನೇಮಿಸುರು ಮಾ
ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ
ದಿಟ್ಟತನದಿ ಪ್ರಾಣಕೊಂಬರು ಮಾ 1
ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು
ಕುಟ್ಟಿ ಅವನಬಾಯಿ ಹಾರರು ಮಾ
ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು
ನೆಟ್ಟನೆ ಘಾಸಿಮಾಡರು ಮಾ
ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು
ನಷ್ಟತನದಿ ಹೊಟ್ಟೆ ಹೊರುವರು ಮಾ
ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು
ಹೆಟ್ಟಿ ಅವನ ಮುಂದೆ ನಡೆಸುರು ಮಾ 2
ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು
ಇದ್ದು ಇಲ್ಲದಂತಾದರು ಮಾ
ಮಂದಮತಿಗಳು ಅಂದಣವೇರಿನ್ನು
ಬುದ್ಧಿವಂತರೀಗ್ಹೀನತಂದರು ಮಾ
ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ
ಕ್ಷುದ್ರತನದಿ ಕೆಡುತಿಹರು ಮಾ
ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು
ಇದ್ದರೆ ಬುದ್ಧಿಹೀನರು ಮಾ 3
ಉಳಿಯಮುಟ್ಟಿದ ದೈವ ಉಳಿಯದೇ ಹೋದವು
ಉಳಿಗಾಲ ವಿಲ್ಲದಂತಾಯಿತು ಮಾ
ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು
ಕಳ್ಳರೆ ಸಾಜರು ಆದರು ಮಾ
ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ
ಸುಳ್ಳರು ನಿಜನುಡಿವೆಂಬುರು ಮಾ
ಉಳ್ಳವರು ಖಳಬುದ್ಧಿ ಕೈಕೊಂಡು
ಇಳೆಯೊಳು ಧರ್ಮವ ಜರೆದರು ಮಾ 4
ಸಾಧುಸಜ್ಜನರೆಲ್ಲ ಭೇದವ ಅಡಗಿಸಿ
ಮೇಧಿನಿಯಲು ಗುಪ್ತರಾದರು ಮಾ
ಇದ್ದರ ಘನಸುಖ ಸಿದ್ಧರ ನೆರೆಯಲಿ
ಬುದ್ಧಿಹೀನರು ತಾವು ಅರಿಯರು ಮಾ
ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ
ಸತ್ ಶಿಷ್ಯಮಹಿಪತಿ ತಿಳಿದನು ಮಾ
ಎಂದಿಗೆ ಬೇಡಿನ್ನು ದುರ್ಜನರ ಸಂಗವು
ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5