ಜಯಮಂಗಳಂ ಶುಭೋದಯ ಮಂಗಳಂ
ಜಯ ಕಕುದ್ಗಿರಿ ಗಂಗಾಧರ ಲಿಂಗಗೆ ಪ
ಜಡೆಯುಡುಪತಿಯು ಗಂಗೆಯೊಡಗೂಡ್ದ ಮಸ್ತಕಕೆ
ಮಡುಹಿ ಮಾರನ ಭಸಿತದಾಳ್ದ ಪಣೆಗೆ
ಪೆಡೆಯೆತ್ತಿ ಗಾನಗೈವಹಿ ಕುಂಡಲಂಗಳಿಗೆ
ದೃಢಭಕತರಿಷ್ಟದಾಯಕ ಶಿವನಿಗೆ 1
ಸೋಮಸೂರ್ಯಾಗ್ನಿ ಲೋಚನೆಗೆ ವಿಷದಾಳಿ ಸುರ
ಸ್ತೋಮವನು ಕಾಯ್ದ ಶೋಭನ ಕಂಠಕೆ
ಭೀಮನಿಗೆ ಭಯಹರಗೆ ಪರಶುಮೃಗ ಹಸ್ತನಿಗೆ
ಕಾಮಿತಾರ್ಥದ ವರಾಭಯ ಕರನಿಗೆ 2
ನಾಗಕಂಕಣಧರಗೆ ನಾಗೋತ್ತರೀಯನಿಗೆ
ನಾಗಯಜ್ಞೋಪವೀತವ ತಾಳ್ದಗೆ
ನಾಗಚರ್ಮಾಂಬರಗೆ ನಗರಾಜ ಚಾಪನಿಗೆ
ಗಮನ ಬಾಣಗೆ ಶಿವನಿಗೆ 3
ಗಿರಿಜೆಗರ್ಧಾಂಗವನ್ನಿತ್ತ ಶುಭವಿಗ್ರಹಗೆ
ವರ ವೃಷಭವನ್ನೇರಿ ಸಂಚರಿಪಗೆ
ಬರೆದುಂಗುಟದಿ ಹೊಳೆದ ಚಕ್ರದಿಂ ದೈತ್ಯಕುಲ
ಹರಣ ವರದಾಯಕಗೆ ಸರ್ವೆಶಗೆ 4
ತಿರುಪತಿಯ ವಾಸವನು ದೃಢಗೈದು ಕಕುದ್ಗಿರಿಯ
ಪರಮ ಕ್ಷೇತ್ರದಿ ಮಹಿಮೆಗಳ ತೋರ್ಪಗೆ
ವರದ ವೆಂಕಟಪತಿಗೆ ಗಂಗಾಧರೇಶ್ವರಗೆ
ಶರಣಾಗತರ ಕಾಯ್ವ ಸಾಂಬಶಿವಗೆ 5