ಆತ್ಮಶೋಧನೆ
ಆದ ವಿಷಯಗಳು ಬಾಧಿಸದಂತೆನ್ನ
ಮಾಧವ ನೀ ಪೊರೆಯೋ ದಯಾನಿಧೇ ಪ
ಕ್ರೋಧವ ಬಹುತರ ಸಾಧಿಸಿ ಮನದಲಿ
ಖೇದವ ಪೊಂದಿದೆನೊ ರಮಾಧವ ಅ.ಪ
ಹೆಜ್ಜೆಯನರಿಯದೆ ಗೆಜ್ಜೆಕಟ್ಟಿಹೆನೆಂದು
ಗರ್ಜಿಸುತಿರುವರು ದುರ್ಜನರೆಲ್ಲರು
ಮರ್ಜಿಯನರಿಯುವ ಸಜ್ಜನರೆನ್ನನು
ವರ್ಜಿಸ ಬಿಡದಿರೊ ಮೂರ್ಜಗದೊಡೆಯನೆ 1
ರೀತಿಯನರಿಯದೆ ಆತುರದಲಿ ಮನ
ಸೋತೆನೆನ್ನುತಿಹರೋ ದುರಾತ್ಮರು
ಖ್ಯಾತಿಗಾಗಿ ಧನ ಪ್ರೀತಿಗಾಗಿ ಸಭ್ಯ
ನೀತಿಯ ಮಾರ್ಗದಿಂದ ಚಲಿಸದೆ ಪೊರೆಯೊ 2
ನಿನ್ನ ನಾನರಿತೆನೊ ಎನ್ನನರಿತು ನೀ ಪ್ರ
ಸನ್ನನಾಗಿ ನಿನ್ನ ಸೇವೆಯ ನೀಡಲು
ಅನ್ಯರಂತಿರಲಿ ನಿನ್ನ ಮನಕೆ ನಾ
ಅನ್ಯನಾಗದಂತೆ ಸತತವು ಕರುಣಿಸೊ 3