ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಜನಿಸಿ ನಾ ಬುವಿಯೊಳು ನಿನಗೆ ದುಡಿಯುವುದಾಯ್ತು ಎನಗೇನುಫಲ ಪೇಳು ಮಾಯವೆ ಎಲೆ ಜೀವವೆ ಪ ನಿನಗೆ ನೀ ದುಡಿಯುವಿ ಎನಗೆ ದುಡಿಯುವುದೇನು ದಿನಸರಿಯದೆನುವುದು ನ್ಯಾಯವೆ ಎಲೆ ಕಾಯವೆ ಅ.ಪ ಘನರೋಗ ತಾಪತ್ರವನುಭವಿಸುವುದೆಲ್ಲ ನಿನಗಾಗಲ್ಲೇನು ಪೇಳು ಮಾಯವೆ ಎಲೆ ಜೀವವೆ ನಿನಗೆ ಬಂದ ಕರ್ಮವನುಭವಿಪೆಯಲ್ಲದೆ ಎನಗಾಗೆನುವುದು ನಿಜನ್ಯಾಯವೆ ಎಲೆ ಕಾಯವೆ 1 ಬನ್ನ ಬಡುವೆನಲ್ಲ ಕರ್ಮ ಮಾಯವೆ ಎಲೆ ಜೀವವೆ ಎನ್ನ ಜೋಪಾನವು ನಿನ್ನಿಂದಲೆಂಬುವುದು ಮಣ್ಣುಗೊಂಬೆ ನಿನಗೆ ನ್ಯಾಯವೆ ಎಲೆ ಕಾಯವೆ 2 ಚಳಿಮಳೆಬಿಸಿಲಿನ ಬಲುತಾಪದಲಿ ನಿನ್ನ ಸಲಹುವರಾರ್ಹೇಳು ಮಾಯವೆ ಎಲೆ ಜೀವವೆ ಚಳಿಮಳೆಬಿಸಿಲಿನ ಬಲುತಾಪ ಎನಗೆಲ್ಲಿ ಎಲುವಿನ್ಹಂದರ ನಿಂದೀನ್ಯಾಯವೆ ಎಲೆ ಕಾಯವೆ 3 ಭಿನ್ನ ಮಾತುಗಳೇನೋ ಮಾಯವೆ ಎಲೆ ಜೀವವೆ ನಿನ್ನದು ದಾವೂರು ನನ್ನದು ದಾವೂರು ಎನ್ನ ಸರಿಗಟ್ಟುವುದು ನ್ಯಾಯವೆ ಎಲೆ ಕಾಯವೆ 4 ನಾನಿಲ್ಲದಿರೆ ನಿನ್ನ ಖೂನವರಿವರಾರು ನೀನೆ ಪೇಳೆಲೋ ನಿಜ ಮಾಯವೆ ಎಲೆ ಜೀವವೆ ಹೀನನೆ ನೀನೆನ್ನ ಖೂನವರಿಯದೆ ಬಿನಗು ಶ್ವಾನನಂತೊದರುವುದು ನ್ಯಾಯವೆ ಎಲೆ ಕಾಯವೆ 5 ಹೊನ್ನೂ ಹೆಣ್ಣು ಮಣ್ಣು ಎನ್ನಿಂದ ಪಡೆದು ನೀ ಧನ್ಯನೆನಿಸುವೆಯಲ್ಲ ಮಾಯವೆ ಎಲೆ ಜೀವವೆ ನಿನ್ನಗದರ ಫಲ ಎನ್ನಗೇನೆಲೆ ಪಾಪಿ ನಿನ್ನ ಮೋಹಿಸಿ ನಾನು ಕೆಡುವೆ ಎಲೆ ಕಾಯವೆ 6 ಎನ್ನಿಂದ ಕೆಡುವೆನೆಂಬನ್ಯವಾದವು ಬೇಡ ನಿನ್ನದೆಲ್ಲವ ಬಲ್ಲೆ ಮಾಯವೆ ಎಲೆ ಜೀವವೆ ಬನ್ನ ಬಡುವೆ ಸತತ ಎನ್ನನರಿವುದು ನಿನ್ನಗಳವೇ ಎಲೆ ಕಾಯವೆ 7 ಹೇವನಿನಗ್ಯಾಕಿಷ್ಟು ಸಾವುತ್ಹುಟ್ಟುತ ನೀನು ನೋಯುವುದ ಬಲ್ಲೆ ನಾ ಮಾಯವೆ ಎಲೆ ಜೀವವೆ ಹೇವದಮಾತಲ್ಲ ಸಾವುಹುಟ್ಟೆನಗಿಲ್ಲ ಕೇವಲನಾದಿಕಾಲದಿರುವೆ ಎಲೆ ಕಾಯವೆ 8 ಕೇವಲನಾದಿಯು ಜೀವ ನೀನಾದರೆ ದೇವರೆ ನೀನಿದ್ದಿ ಮಾಯವೆ ಎಲೆ ಜೀವವೆ ದೇವರು ನಾನಲ್ಲ ದೇವ ಶ್ರೀರಾಮನ ಕೇವಲದಾಸ ನಾನಿರುವೆ ಎಲೆ ಕಾಯವೆ 9
--------------
ರಾಮದಾಸರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು