ಮುಂದೆನಗೆ ಗತಿಯೇನೋ ಇಂದಿರೇಶಾ
ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ
ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ
ನಾ ಕಂಠಪರಿಯಂತ ಕುಡಿದೆನೊ ಹಾಲ
ಬೇಕೆಂದು ಹರಿವಾಸರಂಗಳಾಚರಿಸದೆಯೆ
ಸಾಕೆಂಬವೊಲು ಸುಖವ ಸೂರೆಗೊಂಡೇ 1
ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ
ಸತಿಸುತರೆ ಸರ್ವಸ್ವವೆಂದಿರ್ದೆನೋ
ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ
ಮತಿವಿಕಳನಾದೆನೋ ಪತಿತಪಾವನನೇ 2
ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ
ಉಲ್ಲಪದಿ ನಾಕುಳಿತು ನೋಡುತಿದ್ದೆ
ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ
ಖುಲ್ಲುಮಾತುಗಳಾಡಿ ನೋಯಿಸಿದೆ ನರರ 3
ತಾರೆಂಬುದಕೆನಾನು ತೌರುಮನೆಯಾಗಿರುವೆ
ಪಾರಮಾರ್ಥಕವಾಗಿ ಕೊಡುವುದರಿಯೆ
ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ
ಘೋರಪಾತಕಿಯಾಗಿ ಇರುವೆಯೀ ಜಗದಿ 4
ನರ್ಮದಾನದಿ ಸ್ನಾನ ನಿರ್ಮಲೋದಕಪಾನ
ಧರ್ಮ ಮರ್ಮಗಳರಿತು ಮಾಡುವುದು ದಾನ
ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ
ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ 5
ನಿತ್ಯ ಜೀವಿಸುವುದನ್ನು
ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು
ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ
ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು 6
ನೀನು ಒಲಿಯುವ ಪರಿಯದಾವುದನು ಮಾಡಿಲ್ಲ
ಏನು ಮಾಡಲು ಎನಗೆ ಮನಸು ಬರದು
ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ
ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ7