ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ
ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ ಪ
ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ
ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು
ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ
ಕುಂಭಿನಿಯೊಳ್ಹನುಮನಂಥ ಮತಿ ನೀಡಿ ಸಲಹು 1
ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು
ಪಾಲಿಸು ಜಟಾಯುನಂಥ ಶೀಲಮತಿಯೆನಗೆ
ವಾಲಿಗೆ ನೀನಿತ್ತ ಜಾಳುಮತಿ ನೀಡದೆ
ಸುಗ್ರೀವಗಿತ್ತ ಮೇಲುಮತಿ ನೀಡು 2
ಮೂಡಣಾಧಿಪನಂತೆ ಕೇಡುಮತಿ ನೀಡದೆ
ರೂಢಿಯೊಳ್ಕರಿಯಂಥ ಗಾಢಮತಿ ನೀಡು
ನೀಡದಿರು ಶಶಿಯಂಥ ಖೋಡಿ ದುರ್ಮತಿಯನು
ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ 3
ದುರುಳ ಕೌರವನಂತೆ ಕಿರಿಮತಿಯ ಕೊಡಬೇಡ
ಪರಮ ಪಾಂಡವರಂಥ ಖರೆಮತಿಯ ನೀಡು
ಧರೆಯೊಳ್ಜಯದ್ರಥನಂತೆ ನರಿಮತಿಯ ಕೊಡದಿರು
ವರ ವಿದುರನಂತೆ ಬಲು ನಿರುತಮತಿ ನೀಡು 4
ಮರವೆ ಮತಿ ಒಲ್ಲೆನೌ
ಹರಿಯ ನಿಜ ದಾಸರಂಥ ಸ್ಥಿರತಿಮತಿಯ ನೀಡು
ಹರಣ ಪೋದರು ಬಿಡದೆ ವರದ ಶ್ರೀರಾಮನಡಿ
ಅರಿವಿಟ್ಟು ಭಜಿಸುವಪಾರಮತಿ ನೀಡು 5