ಇದು ಸಮಯ ಜಗದೀಶ ಯಾಕೆ ಸಾವಕಾಶ
ಮದಮುಖರ ಮುರಿದೊತ್ತು ಮಾಕಮಲಜೇಶ ಪ.
ಕ್ಷೀರಾಬ್ಧಿ ಸುಧೆ ಸುರರ ಸೇರಿತೆಂದಸುರೇಶ
ರಾರುಭಟಿಗೊಳೆ ಶಂಬರಾರಿ ಕೆಂಗೆಡಲು
ಕಾರುಣ್ಯವಾರ್ಧಿ ಖಗವೇರಿ ಬಂದ ಭಯಕರ
ದೋರಿದವನೆಂದರಿದು ಚೀರುವೆನು ನಿನ್ನಿದಿರು 1
ಎಷ್ಟೋ ಪರಿಯಿಂದ ಪರಮೇಷ್ಠಿವಂದ್ಯನೆ ಕೃಪಾ-
ದೃಷ್ಟಿಯೆನ್ನಲಿ ನೀನಿಟ್ಟು ಸಲಹುವುದು
ಅಷ್ಟಮದಮೋಹದಿಂದೆಷ್ಟಾದರೂ ಬೇಸರದೆ
ನಿಷ್ಠೂರ ನುಡಿವ ಮತಿಭ್ರಷ್ಟರ ಮನದಪ್ಪದಕೆ2
ನಿನ್ನ ದಾಸರ ನಿಂದೆ ನೀ ಸಹಿಸದವನೆಂದು
ಮುನ್ನ ಮುನಿಗಳು ಪೇಳ್ದ ಮುಖ್ಯ ತತ್ವವನು
ಪನ್ನಗಾಚಲನಾಥ ಪಾಲಿಸುವುದುಚಿತ ಸುರ
ಮಾನ್ಯ ಮಾನವಕಾವರನ್ಯರನು ನಾ ಕಾಣೆ 3