ಕೇಳು ನಾ ಪೇಳ್ವದೊಂದಾ ನಿತ್ಯಾನಂದಾ ಪ.
ಕೇಳು ನಾ ಪೇಳ್ವದೊಂದಾ ಕಂಸಾದ್ಯಸುರವೃಂದ
ಸೀಳಿ ಶೀಘ್ರಾದಿ ಪರಿಹರಿಸಿದಿ ಪಿತೃ ಬಂಧ ಅ.ಪ.
ನಿಗಮ ತತಿಗಳು ನಿಶ್ಯೇಷ ತಿಳಿಯದ
ಸುಗುಣವಾರಿಧಿ ಸುಖಬೋಧ ದೇಹ
ಸ್ವಗತ ಖೇದೊಝ್ಝಿತ ಸರ್ವ ನಿಯಾಮಕ
ಖಗಪತಿವಾಹನ ಕಾಮಿತ ಭಾವನ
ಪಾಲನ ಪರಾತ್ಪರ
ಸ್ವಗತಿ ನಿಯತಿ ಜ್ಞಾನ ದಾಯಕ
ತ್ರಿಗುಣ ವರ್ಜಿತ ತ್ರಿಭುವನೇಶ್ವರ
ಮಗುವು ನುಡಿವುದ ಮಾತೆಯಂದದಿ 1
ಮೊದಲಿನ ಭವಗಳ ಹದನ ಒಂದರಿಯೆನು
ಪಾದ ಪದುಮಗಳ
ಸದರದಿ ಸೇವಿಸಲಧಿಕ ಸಾಧನ ಮಾನು
ಷ್ಯದಿ ಬಂದು ವೈಷ್ಣವ ಬುಧರಾ ಸೇವೆಯ ಬಿಟ್ಟು
ವಿಧವಿಧ ಮೋಹಾಂಧಕಾರಗ-
ಳುದಿಸಲದರೊಳು ಸಿಲುಕಿ ನಿರುಪದಿ
ಬಧಿರ ಮೂಕ ಜಡಾಂಧನಾದೆನು
ಸದಯ ಇನ್ನಾದರೂ ಕಟಾಕ್ಷದಿ 2
ತಾಪತ್ರಯೋನ್ಮೂಲನೇಶಾ ಕೌಸ್ತುಭಭೂಷ
ಸುಜನ ಗಣೈಕ ಪೋಷಾ
ಈಪರಿಯೊಳಗೆನ್ನ ಜರಿವದುಚಿತವೇನೊ
ಕಾಪುರುಷರ ಸಂಗ ಕಡಿದು ಕರುಣವಿಟ್ಟು
ಶ್ರೀ ಪಯೋಜ ಭವೇಂದ್ರ ವಂದ್ಯ ಪ್ರ-
ದೀಪ ಸತ್ಸಿದ್ಧಾಂತ ತಿಳಿಸಿ ಪ-
ದೇ ಪದೇ ಕಾಪಾಡು ವೆಂಕಟ
ಭೂಪ ನೀ ಗತಿಯೆಂದು ನಂಬಿದೆ ಕೇಳು 3