ಕೊಡುಕೊಡು ವರವನು ತಡವು ಮಾಡದೆ ಎ
ನ್ನೊಡೆಯ ಶ್ರೀಹರಿ ಕೃಪೆ ಮಾಡಯ್ಯ ಪ
ಬಿಡದಿರೆನ್ನನು ಜಗದೊಡತಿಯಾಣೆ ನಿ
ನ್ನಡಿಗಳನೆಂದಿಗೂ ಬಿಡೆನಯ್ಯಾ ಅ.ಪ
ಕ್ಷಿತಿಯೊಳಗತಿಶಯ ಪತಿತ ಪಾವನ ಶ್ರೀ
ಪತಿ ನೀಗತಿ ಎನುತಿಹೆನಯ್ಯ
ರತಿಪತಿಪಿತನೆ ಸುಮತಿಯನು ಪಾಲಿಸಿ
ಗತಿಯನು ತೋರಿಪುದೆನಗಯ್ಯ1
ನಿನ್ನ ಪದವ ನಂಬಿ ನಿನ್ನವನೆನಿಸಿದ
ಎನ್ನನುಪೇಕ್ಷಿಪರೇನಯ್ಯ
ಸನ್ನುತ ನಿನ್ನನು ಮನ್ನಿಸಿ ಕೇಳುವ
ಬಿನ್ನಪವಿನಿತೆ ಕೇಳಯ್ಯ 2
ಎಲ್ಲರ ಹೃದಯದೊಳಲ್ಲಿ ನೆಲೆಸಿರುವ
ಫುಲ್ಲನಯನ ನೀ ಪೇಳಯ್ಯ
ಕಲ್ಲುಮನದಿ ನೀನೊಲ್ಲದೊಡೀ ಜಗ
ದಲ್ಲಿ ಪೋಪುದಿನ್ನೆಲ್ಲಯ್ಯ 3
ಪತಿಯಗಲಿದ ಪತಿವ್ರತೆಗೆ ಇತರರಲಿ
ರತಿ ಸಂಜನಿಸುವದೇನಯ್ಯ
ಗತಿಪತಿಯೆಲ್ಲರಪತಿ ನೀನೆನ್ನುತ
ಶ್ರುತಿನುತಿಪುದು ಪುಸಿಯೇನಯ್ಯ 4
ಜಗದೊಳು ನಿನ್ನನೆ ಸುಗುಣಿಯು ಎನ್ನುತ
ನಿಗಮವು ಪೊಗಳುತಲಿಹುದಯ್ಯ
ಖಗಪತಿಗಮನನೆ ಬಗೆ ಬಗೆಯಲಿ ರತಿ
ಸೊಗಯಿಸು ನಿನ್ನೊಳು ಎನಗಯ್ಯ 5
ಸೃಷ್ಟಿನಾಥಪದ ವಿಷ್ಟರ ಭಕ್ತಿಯ
ಕೊಟ್ಟರಭೀಷ್ಟವು ಎನಗಯ್ಯ
ಇಷ್ಟರ ಮೇಲಿನ್ನು ಲಕ್ಷ ಕೊಟ್ಟರೂ ಎನ
ಗಿಷ್ಟವಲ್ಲ ಶ್ರೀ ಕೃಷ್ಣಯ್ಯ 6
ಚರಣಕಮಲದೊಳಗೆರಗುವೆ ಪುಲಿಗಿರಿ
ವರದವಿಠಲ ದಯೆಯಿರಿಸಯ್ಯ
ಚರಣಶರಣನಿಗೆ ಕರುಣಿಸದಿದ್ದರೆ
ಕರುಣಿಗಳರಸರಿನ್ನಾರಯ್ಯ 7