ಯಾಕೆನ್ನ ಎದುರಲಿ ನಿಲ್ಲುವುದಿಲ್ಲೋ
ಯಾಕೆನ್ನಯ ಕರೆ ಕೇಳುವುದಿಲ್ಲೋ ಪ
ಯಾಕೆನ್ನ ಅರ್ಚನೆಗೊಲಿಯುವುದಿಲ್ಲೋ
ಯಾಕೆನ್ನೊಳು ದಯಮಾಡುವುದಿಲ್ಲೋ ಅ.ಪ
ತರಳ ಧೃವನ ಮೊರೆ ಕೇಳಿಸಿತಲ್ಲ
ಕರಿ ಎತ್ತಿದ ಸುಮ ಕಾಣಿಸಿತಲ್ಲ
ಅರಿ ಅನುಜನ ಸೇವೆ ಹಿರಿದಾಯ್ತಲ್ಲಾ
ಕರುಣ ಎನ್ನೊಳಗೇಕೆ ಬರದೋ ಕೃಷ್ಣಯ್ಯ 1
ಅಗಣಿತ ಗೋಪಿಯರೆಡೆಯಲಿ ನಲಿದೆ
ನಗಧರನಾಗಿ ಗೋಪಾಲರ ಪೊರೆದೆ
ಖಗನಿದ್ದೆಡೆಗೇ ಭರದಲಿ ನಡೆದೆ
ನಗುಮೊಗದರಸ ಮಾಂಗಿರಿಯ ರಂಗಯ್ಯ2