ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಎನ್ನು ಹರಿ ಎನ್ನು ಹರಿ ಎನ್ನು ಮನವೆ ಪ. ನಿರುತದಿ ಪೊರೆವನ ಮರೆವರೆ ಮನವೆ ಅ.ಪ. ಸರಿಯುವುದು ಆಯುಷ್ಯ ಸಂಪತ್ತು ನೋಡು ಬರುತಿದೆ ಮೃತ್ಯುವು ಕರೆಯಲು ನೋಡು ಹರಿನಾಮ ಯಮದಂಡ ಕಡಿವುದು ನೋಡು ಪರಮಪುರುಷನ ನೀ ಬಿಡದೆ ಕೊಂಡಾಡು 1 ಹರಿಯ ನಾಮಾಮೃತ ಸುಜನಕೆ ನೀಡು ಹರಿಯ ಜ್ಞಾನಾನಂದಾಂಬುಧಿಯೊಳೊಲ್ಯಾಡು ಹರಿಯ ಮೂರುತಿಯನ್ನು ಮನದಲ್ಲಿ ನೋಡು ಹರಿಭಕ್ತಿ ಮದವೇರಿ ಕುಣಿ ಕುಣಿದಾಡು 2 ಹರಿಗುರು ಸ್ಮರಣೆಯ ನಿರುತದಿ ಮಾಡು ಹರಿಭಕ್ತಿ ಲಾಂಛನ ಮೈಯಲ್ಲಿ ಮೂಡು ಹರಿದಾಸ ಸಂಪತ್ತಿನೊಳಗೆ ಓಲಾಡು ಹರಿಯ ಮನದಿ ಕಂಡು ನಲಿನಲಿದಾಡು 3 ಕಾಮಕ್ರೋಧಗಳನ್ನು ಖಂಡಿಸೀಡ್ಯಾಡು ನೇಮ ಶ್ರೀ ಗುರು ಆಜ್ಞೆಯಂದದಿ ಮಾಡು ಯಾಮ ಯಾಮಕೆ ಹರಿನಾಮವ ಪಾಡು ಶ್ರೀಮದಾನಂದತೀರ್ಥರ ಮತ ನೋಡು 4 ಶ್ರೀ ಪರಮಾತ್ಮನ ಗುಣವ ಕೊಂಡಾಡು ಶ್ರೀಪತಿ ಭಕ್ತರ ಸಂಗದಿ ಕೂಡು ಭವ ಹರ ಸ್ತುತಿ ಮಾಡು ಗೋಪಾಲಕೃಷ್ಣವಿಠ್ಠಲನ ದಯ ಬೇಡು 5
--------------
ಅಂಬಾಬಾಯಿ