ಬನ್ನಿರಿ ದಾಸರೇ ಪೋಗುವಾ ನಮ್ಮ
ಚನ್ನಕೇಶವನೆಂಬ ಹರಿಮಂದಿರಕೇ ಪ
ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ
ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ.
ನಾ ತಂದಿರುವೆನು ಪರಮಾನ್ನವನ್ನು
ತಾತನ ನಾಮಕ್ಕೆ ಬೆರಿಸಿ ಮಾಡಿದೆನು
ನೀತಿಯೊಳಾಭಕ್ತಿ ಮಧುಕ್ಷೀರವನ್ನು
ಸತ್ಯದಿ ಕೂಡಿಸಿ ಸೇವಿಸುವಾ 1
ಪರಹಿತವೆನ್ನುವ ಸಕ್ಕರೆ ತಂದು ನಾ
ಬೆರಿಸುವೆ ಧರ್ಮಗಳೆಂಬ ಪಾಯಸಕೇ
ಹರಿಯ ಕೀರ್ತನೆಗಳ ಅಮೃತವ ಸೇರಿಸಿ
ಪರಮಾನ್ನವೀ ರೀತಿ ಮಾಡಿರುವೆನಯ್ಯ 2
ಹರಿಭಕ್ತಿಯೆಂಬುವ ತಂಡುಲವನೆ ತಂದು
ಹರಿಯ ಸ್ಮರಣೆಯೆಂಬ ವುದಕದಿ ತೊಳೆದು
ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು
ಸರಸದಿ ನಾ ಪಾಕವ ಮಾಡಿರುವೆ 3
ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ
ಪನ್ನಗಶಯನ ಶ್ರೀ ಹರಿಯ ನೆನೆಯುತ್ತ
ಉನ್ನತ ಸೇವೆಯಿಂದಾತನ ಮೆಚ್ಚಿಸಿ
ತಿನ್ನುವಾ ಕೇಶವ ನೀಯುವ ವರವಾ 4