ಸುಮ್ಮನೆ ದೂರುವರೇ ಅಮ್ಮಯ್ಯ ಎನ್ನ
ಸುಮ್ಮನೆ ದೂರುವರೇ ಪ
ತಮ್ಮಯ ಸರಸಕೆ ಸಮ್ಮತಿ ಕೊಡದಿರೆ
ಕಣ್ಮಣಿಯರುಗಳೆಲ್ಲಾ ಅ.ಪ
ಕ್ಷೀರಚೋರನೆಂಬೋರೇ ಅಮ್ಮಯ್ಯ ಇವರ
ಕೋರಿಕೆ ನಡೆಸದಿರೆ
ಕ್ಷೀರ ಸಾಗರಶಾಯಿ ನಾರಾಯಣ ನಾನೆ
ಕ್ಷೀರಕೆ ಬಡತನವೇ ಅಮ್ಮಯ್ಯ 1
ತುಂಟನೆಂಬೋರೆ ಎನ್ನ ಅಮ್ಮಯ್ಯ ಇವರ
ತಂಟೆ ಏತಕೆ ಎನಗೆ
ತುಂಟತನದಿ ಪಾಪ ಗಂಟು ಹೋಯಿತೆ ವೈ
ಕುಂಠಪತಿಯೇ ಸಾಕ್ಷಿ ಅಮ್ಮಯ್ಯ 2
ಮಾಯಗಾರನೆಂಬೋರೆ ಅಮ್ಮಯ್ಯ ಎನ್ನ
ತೋಯಜಾಕ್ಷಿಯರೆಲ್ಲ
ಮಾಯಕೆ ಸಿಲುಕದೆ ಮಾಯೆಗೊಡೆಯನಾಗೆ
ಜಾಯಮಾನವಲ್ಲವೇ ಅಮ್ಮಯ್ಯ 3
ಯಾರಿಂದೆನಗೇನೆ ಅಮ್ಮಯ್ಯ ಎನ್ನ
ಜಾರನೆಂಬೋರೆ ಎಲ್ಲಾ
ಯಾರು ಒಪ್ಪುವರೇ ಕುಮಾರನಲ್ಲವೆ ನಾನು
ಮಾರಜನಕ ನಾನೆ ಅಮ್ಮಯ್ಯ 4
ಎನ್ನ ಮಾತನು ಕೇಳೆ ಅಮ್ಮಯ್ಯ ಈಗ
ಕನ್ನೆಯರಿಗೆ ಪೇಳೆ
ಇನ್ನಾದರು ಇವರು ಅನ್ಯಾಯವ ಬಿಟ್ಟು
ಎನ್ನನು ಪೊಗಳಿದರೆ ಅಮ್ಮಯ್ಯ ಪ್ರಸನ್ನನಾಗುವೆನೆಂದು 5