ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಏನ ಹೇಳಲಿ ಈತನಿರವ ಭಕ್ತರ ಮನಾ- ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ. ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ- ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಜಲವಪೊಕ್ಕು ದೈತ್ಯನ ಸಂಹರಿಸಿ ಕಲಕಿ ಸಮುದ್ರವ ಕಾರಣಕಾಗಿ ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ ಚಲುವ ಚೆಳ್ಳುಗುರಿಂದೊಡಲನೆ ಬಗಿದು ಸುಲಭನಾಗಿ ಶುಕ್ರನ ಕಣ್ಣಿರಿದು ಬಲುಸಾಹಸದಿ ಕ್ಷತ್ರಿಯರನು ಗೆಲಿದು ಗೆಲವ ತೋರಿ ಗೋಪಿಗೆ ಸುತನಾಗಿ ನಿಲುವ ದಿಗಂಬರಧರ ರಾವುತನಾಗಿ ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ 1 ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ ವಲ್ಲಭನವರಗೆಲುವ ಲಜ್ಜೆನಾಚಿಕೆ- ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಎಲ್ಲ ವೇದವನುದ್ಧರಿಸ್ಯಂಬುದಿಯ ಜಲ್ಲಿಸಿ ಧಾರುಣಿಯನು ತಂದಿರುಹಿ ತಲ್ಲಣಿಸುವ ಪ್ರಹಲ್ಲಾದನ ಪೊರೆÀದು ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ ಮಲ್ಲರ ಮಡುಹಿ ಮುಪ್ಪುರದ ಬಾಲೆಯರ ಜಳ್ಳು ಮಾಡಿ ಧರ್ಮವ ಹೋಗ್ಯಾಡಿ ಹಲ್ಲಣಿಸುವ ತೇಜಿಯನೇರಿದ ಶಿರಿ ವಾಸುದೇವ ಕಾಣೆ ಅಮ್ಮಯ್ಯ 2 ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ- ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ ತಮನ ಮರ್ದಿಸಿ ಸಾಮವನಜಗಿತ್ತು ಸುಮನಸರಿಗೆ ಸುಧೆಯನು ತಂದೆರದು ಅವನಿಗಳೆದ ಅಸುರನ ಸಂಹರಿಸಿ ಮಮತೆಯಿಂದ ಪುಟ್ಟ ಮಗುವನೆ ಸಲಹಿ ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ ಸಮರಂಗದಿ ಸುರಧೇನುವ ತಂದು ದಿನಕರ ವಂಶೋದ್ಧಾರಕನಾಗಿ ಕಂಸ- ನ ಮಡುಹಿ ಮುಪ್ಪುರದ ಬಾಲೆಯರು ಭ್ರಮಿಸುವಂತೆ ಬೌದ್ಧಾವತಾರನಾದ ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ 3
--------------
ಹೆಳವನಕಟ್ಟೆ ಗಿರಿಯಮ್ಮ
ನಾರಾಯಣ ನಿನ್ನ ಸ್ಮರಣೆಯಲಿ ಮನ ಬೇರು ವೂರಿರುವಂತೆ ಕಾರುಣ್ಯದಲಿ ಕಾಯೊ ಪ ವೇದನಾಲ್ಕರ ಕದ್ದಂಥಾ ದೈತ್ಯನ ಕೊಲ್ವಾ ಶದಿ ಮತ್ಯಾವತಾರ ಧರಿಸಿದೆ ಹರಿಯೇ 1 ಮಂದರ ಪೊತ್ತೆ ಭಾವಕಿಯಳ ಮೋಹಿಸಿ ಮೋಹಿನಿಯಾದೆ 2 ವರಹರೂಪದಿ ಪೋಗಿ ಧರೆಯನು ಧರಿಸಿದೆ ದುರುಳ ಹಿರಣ್ಯಕನಕರದಿಂದ ಸೀಳಿದೆ 3 ಕಂದನ ನುಡಿಕೇಳಿ ಕಂಬದಿಂದುದಿಸಿದೆ ತಂದೆಯ ಬಗೆದವನಾ ಛಂದದಿ ಸಲಹಿದೆ 4 ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ತುಳಿದು ಆತನ ಮನೆ ಬಾಗಿಲ ಕಾಯ್ದೆಯೊ 5 ತಾತನ ಮಾತನು ಕೇಳಿ ಮಾತೆಯ ಕೊಂದೆ ಖ್ಯಾತಿಯಿಂದಲಿ ಕ್ಷತ್ರಿಯರನು ಸಂಹರಿಸಿದೆ 6 ಮಾತೆಯ ವರ ಕೇಳಿ ನೀತಿಯಿಂದಲಿ ಪೋದೆ ಸೇತುವೆ ಕಟ್ಟಿ ನೀಖ್ಯಾತರಾವಣನಕೊಂದೆ 7 ಪುಟ್ಟ ಶಿಶುವಾಗಿ ಗೋಪಿಗೆ ಮುದ್ದು ತೋರಿದೆ ಬೊಟ್ಟಿಲಿ ಗಿರಿಯನು ನೆಗಹಿದೆ ಶ್ರೀ ಕೃಷ್ಣಾ 8 ತ್ರಿಪುರರ ಸತಿಯರ ವ್ರತವಗೆಡಿಸುವಂಥಾ ಅಪರಿಮಿತದಿ ಮೋಹಿಸುವಾ ಮೂರ್ತಿಯಾದೆ 9 ಭಕ್ತವತ್ಸಲ ದೇವಾ ಯುಕ್ತಿಯಿಂದಲಿ ಕಾಯ್ವ ವ್ಯಕ್ತಿ ಕಲ್ಕ್ಯಾವತಾರ ಧರಿಸಿದ ಹರಿಯೇ 10 ಶಬ್ದವ ನುಡಿಸುವ ಅಬ್ದಿನಿನ್ನದೊ ದೇವಾ ಶಬ್ದವಾಲಿಸದ ನಿಶ್ಯಬ್ದದೊಳಿರಿಸೆನ್ನಾ 11 ಅಂತರದೊಳಗೆನ್ನಾ ಕಂತುನಾರಾಯಣಾ ಸಂತಸದೊಳು ನಿಜ ಶಾಂತಿ ಪಾಲಿಪ ಗುರು 12
--------------
ಶಾಂತಿಬಾಯಿ
ಮಂದಗಮನೆ ಕರೆದುತಾರೆ ಇಂದಿರೇಶನ ಚಂದ್ರ ಸೂರ್ಯಕೋಟಿ ತೇಜದಿಂದ ಮೆರೆವನಾ ಪ ನಿಗಮ ಚೋರನ ಕೊಂದು ವೇದವತಂದ ಮತ್ಸ್ಯನಾ ನಗವ ಬೆನ್ನೊಳಾಂತ ಮಥನದೊಳಗೆ ಕೂರ್ಮನ ಜಗವ ಕದ್ದ ಖಳನ ಕೊಂದ ವರಹರೂಪನ ಮಗನ ಕೊಲಲು ಬಂದು ಕಾಯ್ದ ನಾರಸಿಂಹನ 1 ಬೆಡಗಿನಿಂದ ಬಲಿಯಬೇಡಿ ಧರೆಯ ನಳೆದನ ಬಿಡದೆ ಕ್ಷತ್ರಿಯರನು ಕೊಂದ ಪರಶುರಾಮನ ಮಡದಿಗಾಗಿ ಜಲಧಿಗಟ್ಟಿ ಸತಿಯ ತಂದನ ಕಡಲ ಮನೆಯ ಮಾಡಿನಿಂದ ವಾರಿಜಾಕ್ಷನ 2 ವರ ಪತಿವ್ರತೆಯ ಮಾನಗೊಂಡ ವರದ ಭೌದ್ಧನ ಹರಿಯನೇರಿ ಮ್ಲೇಂಛ ಕುಲವ ಕೊಂದ ಕಲ್ಕ್ಯನಾ ಮರುತ ಸುತನ ಕೋಣೆವಾಸ ಲಕ್ಷ್ಮೀ ರಮಣನ ಸರಿಸಿ ಜಾಕ್ಷಿ ತಂದು ತೋರೆ ಸುಜನರೊಡೆಯನ 3
--------------
ಕವಿ ಪರಮದೇವದಾಸರು