ದೂರ ತರುವಿರೇನೆ ಕೃಷ್ಣನ ಮೇಲೆ ಪ
ದೂರ ತರುವಿರೇನೆ ಚೋರಾಗ್ರೇಸರನೆಂದು
ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ
ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು
ಕರದಿಂದಲೆತ್ತಿ ಮುತ್ತಿಟ್ಟೆಯಂತೆ
ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ
ಕೊರಳಿಟ್ಟು ಬರಿಗೈಯ ತೋರಿದೆಯಂತೆ 1
ಹಸಿದೆ ಬಾ ಕಂದ ಮೊಸರ ಕುಡಿಯೆಂದು
ಹುಸಿನಗೆಯ ಬೀರಿ ಕೈಹಿಡಿದರವಳು
ಉಸಿರಾಡದಂತೆ ಅಧರಕಧರವನ್ನಿಟ್ಟು
ಹಸಿವಾರಿತಿನ್ನು ನೀ ಹೋಗೆಂದಳಂತೆ 2
ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ
ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ
ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು
ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ 3
ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು
ಸಣ್ಣ ತೋಳನು ಹಿಡಿದು ಎಳೆದಾಡಲವಳು
ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ
ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ 4