ಶ್ರೀರಾಮ ತುಳಸಿವರ ಶ್ರೀಕೃಷ್ಣ ತುಳಸಿ ಪ
ನಿನ್ನ ಪಾದವು ಚತುರ್ಮುಖನ ಭಾಗವು ದೇವಿ
ನಿನ್ನ ತುದಿ ಕೈಲಾಸನಾಥ ಶಿವ ಭಾಗವು
ನಿನ್ನ ಮೈಯೊಳು ಸಕಲ ದೇವತೆಗಳಿಹರು 1
ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ
ರಂಗನಾಥ ಸಮೇತ ದಿವ್ಯ ಕಾವೇರಿಯು
ಮಂಗಳೆಯೆ ನಿನ್ನಾವಾಸವಾಗಿಹರು 2
ಕಾಶಿ ಕಂಚಿಯು ಮಧುರೆ ನೈಮಿಷ ಹರಿದ್ವಾರ
ಭಾಸುರದ ಗೋಕರ್ಣ ದ್ವಾರಕಾವತಿಯು
ಶ್ರೀಶೈಲ ಹಿಮವಂತ ಸರ್ವ ಸುಕ್ಷೇತ್ರಗಳು
ಭಾಸಮಾಗಿರುತಿಹವು ನಿನ್ನ ನೆರಳಿನಲಿ 3
ನಿನ್ನ ಬೃಂದಾವನವೆ ವೈಕುಂಠ ಕೈಲಾಸ
ನಿನ್ನ ತೀರ್ಥವೆ ಸಕಲ ಪುಣ್ಯತೀರ್ಥ
ನಿನ್ನ ದರ್ಶನವೆಲ್ಲ ದೇವತಾ ದರ್ಶನವು
ನಿನ್ನ ಪೂಜೆಯೆ ಸಕಲ ದೇವತಾ ಪೂಜೆ 4
ನೀನಿರುವ ದೇಶದಲಿ ರೋಗಗಳ ಭಯವಿಲ್ಲ
ನೀನಿರುವ ದೇಶದಲಿ ಯಮನ ಭಯವಿಂತಿಲ್ಲ
ನೀನಿರುವ ದೇಶದಲಿ ಭೂತ ಭಯವಿಲ್ಲ 5
ಗಂಧ ಪುಷ್ಪವು ಧೂಪ ದೀಪ ನೈವೇದ್ಯದಿಂ
ವಂದಿಸುತ ನಿನ್ನ ನಾಂ ಪೂಜೆಗೈಯುವೆನು
ಇಂದಿರೆಯ ಸೌಭಾಗ್ಯ ಸಂತತಿಯ ನೀನಿತ್ತು
ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವಂ6
ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿಜಯ ಮಂಗಳಂ ತುಳಸಿ ಧೇನುಪುರ ದೇವಿ 7