ಘನತರ ದೂರದೊಳು ಸಮಮತದೊಳು
ವನಜನಾಭನತಿ ಮನಸಿಜಾನ್ವಿತನಾದ
ವನಿತೆ ನೀ ದಾರೆಂದಾ ನಿನ್ನೊಳು
ಮನಸೋತೆ ಕೇಳೆಂದಾ ಪ
ಮತ್ಸ್ಯಗಂಗಳಲಿ ಸ್ವಚ್ಛ ಜಲವು ಯಾಕೆ
ಮತ್ಸ್ಯಾವತಾರದ ಉತ್ಸವ ತೋರುವಿ ವನಿತೆ ನೀ ಬಾರೆಂದಾ 1
ಕೂರ್ಮ ಕಠೋರದ ಹೆರಳು ಭಂಗಾರವು
ಕೂರ್ಮಾವತಾರದ ಮರ್ಮವ ತೋರುವಿ2
ಸರಸ ಮೌಕ್ತಿಕದ ಮುರವು ನಾಸದೊಳು
ವರಹವತಾರದ ಕುರುಹು ತೋರುವಿ 3
ಹರಿಯ ಹಿಡಿಯ ತಂತಿ ಭರದಿ ಬಳುಕುತೆ
ನರಸಿಂಹರೂಪದೆ ಸ್ಮರಣೆ ತೋರುವಿ 4
ವಾಮನ ಬಾಲೆ ನೀ ಸಾಮಜೆ ಗಮನೆ
ವಾಮನ ರೂಪದ ಸೀಮಾ ತೋರುವಿ 5
ತಾಮಸಗಿಡಗಳ ಕಾಮಿಸಿ ತವಿಸುವಿ
ರಾಮನ ಕಾಲದ ನೇಮವ ತೋರುವಿ 6
ಸ್ಮರಶರದಂದದಿ ಕರದಿ ಕೇತಕಿ ಪುಷ್ಪ
ಪರಶುರಾಮನ ಅರುಹ ತೋರುವಿ 7
ಎದೆಯೊಳಚಲಸ್ತನ ಮುದದಿ ಧರಿಸಿರುವೆ
ಮಾಧವ ತಾರದ ಸದವು ತೋರುವಿ 8
ಅಂಗಜ ಬಾಣದಿಂದಂಗದ ಪರವಿಲ್ಲ
ಮಂಗಲ ಬೌದ್ಧನ ರಂಗವ ತೋರುವಿ 9
ಮನಸಿಜಾಶ್ವವೇರಿ ವನಿತೆ ಕಂಗೊಳಿಸುವಿ
ಪರಿ ವನಪು ತೋರುವಿ 10
ಕುರುಹು ಅರಿದೆ ನಿನ್ನ ಬೆರದು ಸುಖಿಪರನ್ನೆ
ನರಸಿಂಹವಿಠಲನರಸಿ ಬಂದಿರುವೇ 11