ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು
ಬೀಸಿದ ಗುಂಡಗೆ ಬುಕ್ಕಿದ್ದೇ ಲಾಭ ಬೇಸರವಿಲ್ಲದೆ ಪ ವಾಸುಕಿಶಯನನ ಲೇಶವು ಭಜಿಸದೆ ಅ.ಪ ಹಗಲು ಇರುಳು ವಿಷಯಗಳಲಿ ಮುಳುಗಿ ಪೊಗಳದಿರಲು ಹರಿ ನಾಮವನು ಜಗದೊಳೆನಗೆ ಸಮರಾರೆಂದೆನುತಲಿ ಬೊಗಳಿ ನರಕಕ್ಕುರುಳುವೆನೆಂದರಿಯದೆ 1 ಮೋಸದಿಂದ ಧನರಾಶಿಗಳಿಸಿ ಅತಿ ಹೇಸಿಗೆ ಭೋಗಗಳಾಶಿಸುವ ಈಶನಂತೆ ಬಲು ಮೆರೆಯುತ ಮದದಲಿ ಶ್ರೀಶ ಸಹಾಯವ ಬಯಸದ ತನಕ 2 ಗಂಗಾ ಶುಚಿಜಲ ದೊರಕುತಿರೆ ಹಲ ವಂಗವ ನೀರನು ಬಯಸುವರೇ ಮಂಗಳ ಕರ್ಮಗಳಾಚರಿಸದೆ ನೀ ಮಂಗನಂದದಲಿ ಕುಣಿಯುವ ತನಕ 3 ಕಂಗಳಿಲ್ಲದ ಕುರುಡನಿಗೆ ಬೆಳ ದಿಂಗಳ ಸೌಖ್ಯವು ತೋರುವುದೆ ರಂಗನ ಮಹಿಮೆಯನರಿಯದ ಮೂಢನು ತಂಗಳು ಭೋಗವ ಬಯಸುವ ತನಕ 4 ಕನ್ನಡಿಯೊಳಗಿನ ಗಂಟಿನಂತಿರುವುದು ನಿನ್ನ ನಶ್ವರದ ಭೋಗಗಳು ಇನ್ನಾದರು ನಿನ್ನ ಮೂಢತನವ ಬಿಟ್ಟು ಸಂತತ ಭಜಿಸೋ ಪ್ರಸನ್ನ ಶ್ರೀಹರಿಯ 5
--------------
ವಿದ್ಯಾಪ್ರಸನ್ನತೀರ್ಥರು
ಹಣವೆÉ ನಿನ್ನಯ ಗುಣವೇನು ಬಣ್ಣಿಪೆನೊ ಪ. ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ. ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ ಹೊಲೆಯನಾದರೂ ತಂದೊಳಗಿರಿಸುವಿ 1 ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ ಶೃಂಗಾರಾಭರಣಂಗಳ ಬೇಗ ತರಿಸುವಿ ಮಂಗನಾದರೂ ಅನಂಗನೆಂದೆನಿಸುವಿ ಕಂಗಳಿಲ್ಲದವಗೆ ಮಗಳ ಕೊಡಿಸುವಿ 2 ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ ಸÀರುವರಿಗೆ ಶ್ರೇಷ್ಠನರನ ಮಾಡಿಸುವಿ ಅರಿಯದ ಶುಂಠನ ಅರಿತವನೆನಿಸುವಿ ಸಿರಿ ಹಯವದನನ ಸ್ಮರಣೆ ಮರೆಸುವಿ 3
--------------
ವಾದಿರಾಜ