ವೃಂದಾವನದಿ ನಿಂದಿಹನ್ಯಾರೆ ಗೋವಿಂದನಲ್ಲದೆ
ಚಂದಿರವದನೆ ನೋಡುವ ಬಾರೆ ಪ.
ಕೋಟಿಸೂರ್ಯ ಪ್ರಕಾಶ ಕಿರೀಟದ ಬೆಳಕಿದು
ಹಾಟಕಾಂಬರಧರನ ನೋಟದಿ ಸುಖಿಸೆ
ಕೋಟಲೆ ಸಂಸಾರ ದಾಟಿ ಪೋಗಿ ಕೃಷ್ಣ
ನಾಟ ನೋಡಿ ಮನ ಕವಾಟವ ಬಿಚ್ಚೆ
ಪೂರ್ಣ ನೋಟದಿ ನೋಡುವ 1
ರಂಗನಾ ಕೊಳಲ ಬೆಳದಿಂಗಳ ಸೊಗವಿಲೆ
ಮ್ಮಂಗವ ಅಂಗಜನೈಯ್ಯಗೀಯುತೆ
ಕಂಗಳಿಗ್ಹಬ್ಬವೆ ರಂಗನ ನೋಡುತೆ
ಗಂಗಾಜನಕನ ವಲಿಸಲು ನಮಗೆ
ಹಿಂಗದ ಮುಕುತಿಯ ರಂಗಗೊಡುವ ಬಾರೆ 2
ಜಯ ಜಗದೀಶನ ಜಯ ರಮಕಾಂತನ
ಜಯ ಕರ್ಮನೀಯನ ಜಯ ಶ್ರೀ ಶ್ರೀನಿವಾಸನ
ಜಯ ಯದು ತಿಲಕನ ಜಯ ಕೂಡಾಡುವ
ಜಯಪ್ರದನಾಗುತೆ ಜಗದಿ ಪೊರೆವ ಬಾರೆ 3