ಸುರೇಶ ಪದವಿಯ ಬೇಡುವನಲ್ಲ
ನರೇಶ ಭಾಗ್ಯವ ಕೋರುವನಲ್ಲ ಪ
ಗುರೂಪದೇಶವ ಮರೆಯುವನಲ್ಲ
ಪರೇಶ ಸ್ಮರಣೆಯ ಬಿಡುವವನಲ್ಲ ಅ.ಪ
ಜನನ ಮರಣಕೇ ಹೆದರುವನಲ್ಲ
ಜನುಮಗಳು ಬೇಡ ಎನ್ನುವನಲ್ಲ
ಮನದಿ ವ್ಯಾಮೋಹವ ಪಡೆಯುವನಲ್ಲ
ವನಜನಾಭನ ನಾಮ ಮರೆಯುವನಲ್ಲ1
ನಿನ್ನ ಚರಿತಗಳ ಕೇಳದೆ ಬಿಡೆನು
ನಿನ್ನ ಮೂರ್ತಿಯ ನೋಡದೆ ಬಿಡೆನು
ನಿನ್ನ ಪಾದಾರ್ಚನೆ ಮಾಡದೆ ಬಿಡೆನು
[ನಿನ್ನ ನಾಮಂಗಳ ನುತಿಸದೆ ಬಿಡೆನು] 2
ಮಾಂಗಿರಿಪತಿ ನಿನ್ನ ಒಲಿಸದೆ ಬಿಡೆನು
ಕಂಗಳಿಂದಾನಂದ ಪಡೆಯದೆ ಬಿಡೆನು
ಅಂಗಾಂಗದ ಸೇವೆ ಮಾಡದೆ ಬಿಡೆನು
ರಂಗ ಸಮರ್ಪಣ ಎನ್ನದೆ ಬಿಡೆನು 3