ಹುಡುಕಿದಳೆಶೋದ ಕಂದನ
ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ
ಕಂಗಳನಿಕ್ಕಿ ಕಾದಿಹ್ಯದು
ಸಿಂಗರದ ಗೋಪಿರ್ಹೆಂಗಳೆಯರು
ರಂಗನ ಸುಖಕವರು
ಗುಂಗುಹಿಡಿದು ಕುಳಿತಿಹ್ಯರು
ರಂಗುಮಂಟಪದೊಳಗೆ ಎನ್ನ
ಕಂಗಳಿದರ ಕಾಣನಾವ
ಅಂಗನೆಯರಡಗಿಸಿದರೆಂದು
ಅಂಗಲಾಚಿ ಅಂತರಂಗದಿ 1
ಉನ್ನತೋನ್ನತ ಋಷಿಗಣರು
ಪನ್ನಂಗಶಾಯಿಯ ಸನ್ನಿಧಿಲವರು
ಮುನ್ನಾವ ಕಾಲದಿಂ ಕುಳಿತಿಹರು
ಭಿನ್ನವಿಲ್ಲದೆ ತಪವ ಮಾಳ್ಪರು
ಇನ್ನು ಕಾಣಲವರು ತಮ್ಮಿಷ್ಟ
ವನ್ನು ಪೂರ ಪಡೆವನಕ
ಎನ್ನ ಕಣ್ಣಿಗೆ ಹಾಕರೆಂದು
ಬನ್ನಬಡುತ ತನ್ನೊಳ್ತಾನು 2
ದೂಷಣೆ ಭೂಷಣಗಳನೊದೆದ
ಮೋಸ ಕ್ಲೇಶಗಳನು ತರಿದ
ಆಶಾ ಪಾಶಗಳನು ಜರಿದ
ಈಶನುನ್ನತ ನಿಜವ ತಿಳಿದ
ಶ್ರೀಶ ಶ್ರೀರಾಮ ನಿನ್ನ ಪಾದ
ದಾಸರು ಕಾಣಲು ತಮ್ಮ ಭಕ್ತಿ
ಪಾಶದಿಂದ ಬಿಗಿದು ಕಟ್ಟಿ
ನ್ನೇಸು ಕಾಲದಿ ಬಿಡರೆಂದರಿದು 3