ಊ. ವಿಶಿಷ್ಟ ಹಾಡುಗಳು
ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ
ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ
ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ
ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ
ಕೋಲುಗಾರನೊಬ್ಬನಲ್ಲಿ ಹೊರಟನಂತೆ
ಬೇಳುವ ಶಂಖದ ಧ್ವನಿಯ ತೋರ್ಪನಂತೆ
ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ
ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ 1
ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ
ಸಾರಿ ಬಂದ ದೂತರಿಂಗೆ ಲಂಚ ನಡೆಯದು
ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು
ಸಾರಿ ಕಂಡು ಬದುಕುವರೆ ದಾರಿವೊಳ್ಳೆದು 2
ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ
ಸದರ ಬಡ್ಡಿಯಿಂದ ಬರೆದು ಚದುರತನದಲಿ
ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ
ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ 3
ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು
ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು
ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು
ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು 4
ಗಂಧಿಕಾರನಂಗಡಿ ಗೋವಿಂದನಲ್ಲಿ
ಚಂದದ ಔಷಧವನ್ನು ತಿಂಬೆವಲ್ಲಿ
ಬಂದ ಭವದ ರೋಗ ಕೊಂದೆವಲ್ಲಿ ಆತ
ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ 5
ಸಾಲವನ್ನು ತಿದ್ದಿ ಮುದದ ಸಾಲವನ್ನು
ನಾಲಿಗೆಯ ಪತ್ರದಿಂದ ತಂದೆವಿನ್ನು
ನೀಲದ ಮಣಿಯನೊಂದ ಕದ್ದುದನ್ನು
ಆಲಿಯೊಳಗಿಟ್ಟುಕೊಂಡು ಬಂದುದನ್ನು 6
ಅಂಗಡಿ ಗೋವಿಂದ ಬಹಳ ಅಂಗವುಳ್ಳವ
ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ
ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ
ಮುಂಗುಡಿಯ ಜನಕೆ ಅಂತರಂಗ ಕೊಡುವವ 7
ದಾಸರಿಗೆ ಧರ್ಮವನ್ನು ಕೊಡುವನಲ್ಲದೆ
ಕಾಸು ಹೊರತು ಮೀಸಲನ್ನ ನೀಡಲರಿಯನು
ಶೇಷಗಿರಿಯವಾಸನೆಂದು ಹಾಸಿಕೊಂಬನು
ಬೇಸರನ್ನು ಕಂಡು ಸಂತೋಷವೀವನು 8
ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ
ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ
ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ
ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ 9